ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತು ಪತ್ತೆ ಪ್ರಕರಣ; ಸಮನ್ಸ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ದರ್ಶನ್ ದಂಪತಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ಇದೀಗ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದ್ದು, ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ಪ್ರಶ್ನಿಸಿ ದರ್ಶನ್ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾಗಿರುವ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಸಲ್ಲಿಸಿರುವ ಖಾಸಗಿ ದೂರಿನ ಸಂಬಂಧ ಟಿ.ನರಸೀಪುರದ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ಪ್ರಶ್ನಿಸಿ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ನಾಗರಾಜ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಅರ್ಜಿಯಲ್ಲೇನಿದೆ?
ಮೈಸೂರಿನ ಫಾರ್ಮ್‌ನಲ್ಲಿ ವಿವಿಧ ಜಾತಿಯ ಹಕ್ಕಿಗಳಿದ್ದವು. ಆ ಹಕ್ಕಿಗಳ ಜತೆಗೆ ಹೇಗೋ 4 ಪಟ್ಟೆ ತಲೆ ಹೆಬ್ಬಾತುಗಳು ಬಂದು ಸೇರಿಕೊಂಡಿವೆ. ಅರಣ್ಯ ಅಧಿಕಾರಿಗಳ ತಪಾಸಣೆ ನಂತರವಷ್ಟೇ ಈ ವಿಷಯ ನಮಗೆ ತಿಳಿದುಬಂದಿದೆ. ವಿಜಯಲಕ್ಷ್ಮೀ ಅವರು ಆ ಫಾರ್ಮ್‌ಗೆ ಭೇಟಿ ನೀಡುವುದೇ ಇಲ್ಲ. ದರ್ಶನ್‌ ಕೂಡ ಅಲ್ಲಿಗೆ ಆಗಾಗ ಮಾತ್ರ ಭೇಟಿ ನೀಡುತ್ತಿರುತ್ತಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪಟ್ಟೆ ತಲೆ ಹೆಬ್ಬಾತುಗಳನ್ನು ತಾವು ಸಾಕಿಲ್ಲ ಎಂದಿರುವ ಅರ್ಜಿದಾರರು, ತಮ್ಮ ವಿರುದ್ಧ ವನ್ಯಜೀವಿ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ವನ್ಯಜೀವಿ ಕಾಯ್ದೆಯಡಿ ಅಪರಾಧ:
ಪಟ್ಟೆ ತಲೆ ಹೆಬ್ಬಾತು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್‌ ಒಂದರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದ್ದು, ಅದರಡಿ ಈ ಪಕ್ಷಿಗಳನ್ನು ಹಿಡಿದಿಟ್ಟುಕೊಳ್ಳುವುದು ಅಥವಾ ಸೆರೆಹಿಡಿಯುವುದು ಗಂಭೀರ ಅಪರಾಧವಾಗಿದೆ. ಈ ಕಾನೂನಿನ ಉಲ್ಲಂಘನೆಯು ಜಾಮೀನುರಹಿತ ಅಪರಾಧವಾಗಿದ್ದು, ಅತಂಹ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲು ಅವಕಾಶವಿದೆ.

Related Articles

Comments (0)

Leave a Comment