ಬಿಎಂಐಸಿಪಿ ಭೂಸ್ವಾಧೀನ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಎತ್ತಿಹಿಡಿದ ವಿಭಾಗೀಯ ಪೀಠ; ನೈಸ್ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶ
- by LegalSamachar
- July 29, 2026
- 12 Views
ಬೆಂಗಳೂರು: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ನೈಸ್) ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ (ಬಿಎಂಐಸಿಪಿ) ರಸ್ತೆ ನಿರ್ಮಾಣಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಾಡಿಕೊಂಡಿದ್ದ ಭೂಸ್ವಾಧೀನ ವಿಚಾರದಲ್ಲಿ ನೂರಾರು ರೈತರಿಗೆ ದೊಡ್ಡ ರಿಲೀಫ್ ನೀಡಿರುವ ಹೈಕೋರ್ಟ್, ನೈಸ್ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖೆಯ ಜತೆಗೆ ಫೋರೆನ್ಸಿಕ್ ಆಡಿಟ್ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಭೂಸ್ವಾಧೀನ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2025ರ ಜುಲೈ 4ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ನೈಸ್ ಸಂಸ್ಥೆ ಹಾಗೂ ಕೆಐಎಡಿಬಿ ಸಲ್ಲಿಸಿದ್ದ 92 ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ಏಕಸದಸ್ಯ ನ್ಯಾಯಪೀಠದ ತೀರ್ಪು ಎತ್ತಿಹಿಡಿದಿರುವ ವಿಭಾಗೀಯ ನ್ಯಾಯಪೀಠ, ನೈಸ್ ರಸ್ತೆಯು ಕೆರೆ, ಜಮೀನುಗಳನ್ನೂ ಅತಿಕ್ರಮಿಸಿದೆ. ದೊಡ್ಡ ಮೊತ್ತದ ಟೋಲ್ ಶುಲ್ಕವನ್ನೂ ಸಂಗ್ರಹಿಸಿದೆ. ರೈತರಿಗೆ ಪರಿಹಾರ ನೀಡದೇ ಭೂಮಿ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸರ್ಕಾರವೇ ತನಿಖೆ ನಡೆಸಬೇಕಿತ್ತು. ಆದರೆ, ಸರ್ಕಾರವೂ ನೈಸ್‌ನ ಅಕ್ರಮಗಳ ಬಗ್ಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಆ ಬಗ್ಗೆ ಸ್ವತಂತ್ರ ತನಿಖೆ, ಫೊರೆನ್ಸಿಕ್ ಆಡಿಟಿಂಗ್ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸಿ ಆದೇಶಿಸಿದೆ.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ಸಂವಿಧಾನದ ಪರಿಚ್ಛೇದ 300ಎ ಅಡಿ ಕಡ್ಡಾಯವಾಗಿ ಪರಿಹಾರವನ್ನು ಪಾವತಿಸದೆ ನೈಸ್ ಸಂಸ್ಥೆ ರೈತರ ಭೂಮಿ ಮತ್ತು ತಲೆಮಾರುಗಳ ಜೀವನೋಪಾಯವನ್ನು ದೋಚಿದೆ ಎಂಬುದನ್ನು ಹೊರತುಪಡಿಸಿದರೆ ನೈಸ್ ಯೋಜನೆಯು ಕಿಂಚಿತ್ತೂ ಒಳ್ಳೆಯದಲ್ಲ. ಇದೀಗ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ 2026ರ ಜುಲೈ 28 ರಂದು ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, 111 ಕಿ.ಮೀ ಎಕ್ಸ್‌ಪ್ರೆಸ್‌ವೇನಲ್ಲಿ, ಕಳೆದ 25-26 ವರ್ಷಗಳಲ್ಲಿ ಕೇವಲ 5 ಕಿ.ಮೀ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸಿದೆ ಎಂದು 292 ಪುಟಗಳ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
ನೈಸ್ ಸಂಸ್ಥೆ 20 ಸಾವಿರ ಎಕರೆಗಳಿಗಿಂತ ಅಧಿಕ ವಿಸ್ತೀರ್ಣದ ಬೃಹತ್ ಭೂಮಿಯನ್ನು ತನ್ನ ಬಳಿ ಇಟ್ಟುಕೊಂಡಿದೆ ಮತ್ತು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಪ್ರದೇಶ ಯೋಜನಾ ಪ್ರಾಧಿಕಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮತ್ತು ಫ್ರೇಮ್‌ವರ್ಕ್ ಅಗ್ರಿಮೆಂಟ್ (ಎಫ್‌ಡಬ್ಲೂಎ) ನಿಯಮಗಳನ್ನು ಉಲ್ಲಂಘಿಸಿ ಭೂಮಿ ಮತ್ತು ಸ್ವತ್ತುಗಳನ್ನು ಪರಭಾರೆ ಮಾಡಿ ಲಾಭ ಮಾಡಿಕೊಂಡಿದೆ. ಕಾನೂನಿಗೆ ವಿರುದ್ಧವಾಗಿ ಮುಗ್ಧ ನಾಗರಿಕರು/ರೈತರನ್ನು ಬಲಿಕೊಡಲಾಗಿದೆ. ಇಷ್ಟೆಲ್ಲ ಆಗಿದ್ದರೂ ನ್ಯಾಯಾಲಯ ಮೂಕ ಪ್ರೇಕ್ಷಕನಂತೆ ಕೂರಲಾಗದು ಹಾಗೂ ಅಕ್ರಮಗಳನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತೀಕ್ಷ್ಣವಾಗಿ ನುಡಿದಿದೆ.
ಪೆರಿಫೆರಲ್ ರಸ್ತೆಗಳ ನಿರ್ಮಾಣ, ಟೋಲ್ ಪ್ಲಾಜಾಗಳ ಸ್ಥಾಪನೆ ಹಾಗೂ ಭಾರಿ ಪ್ರಮಾಣದ ಟೋಲ್‌ಗಳನ್ನು ಸಂಗ್ರಹಿಸುವ ಮೂಲಕ ಫ್ರೇಮ್‌ವರ್ಕ್ ಒಪ್ಪಂದ ಉಲ್ಲಂಘಿಸಿ ರಾಜ್ಯದ ಪೂರ್ವ ಅನುಮತಿಯಿಲ್ಲದೆ ಟೋಲ್ ಹೆಚ್ಚಿಸುವ ಮೂಲಕ, ಎಫ್‌ಡಬ್ಲೂಎ ಅಡಿಯಲ್ಲಿ ಬಾಧ್ಯತೆಗಳನ್ನು ಪೂರೈಸದೆ ಭಾರಿ ಲಾಭವನ್ನು ಗಳಿಸುತ್ತಿದೆ. ನೈಸ್ ತನ್ನ ಕಾರ್ಯಾಚರಣೆಗಳಲ್ಲಿ ಮಾಡಿದ ಹಲವಾರು ಉಲ್ಲಂಘನೆಗಳನ್ನು ರಾಜ್ಯ ಸರ್ಕಾರ ಸ್ವತಃ ಎತ್ತಿ ತೋರಿಸಿದೆ ಎಂದು ಹೈಕೋರ್ಟ್ ಹೇಳಿದೆ.
ನೈಸ್ ಯೋಜನೆಯು ಭೂಮಾಲೀಕರ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಬಲಿಕೊಟ್ಟಿದೆ. ಆದ್ದರಿಂದ, ವಿಶೇಷ ತಜ್ಞರ ತಂಡವು ಸಂಸ್ಥೆಯ ಖಾತೆಗಳ ಫೋರೆನ್ಸಿಕ್ ಆಡಿಟ್ ನಡೆಸಬೇಕು. ಆ ಮೂಲಕ ವಂಚನೆ ಮತ್ತು ಇತರ ಕ್ರಿಮಿನಲ್ ಕೃತ್ಯಗಳನ್ನು ಪತ್ತೆ ಹಚ್ಚಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಸ್ವತಂತ್ರ ಮೌಲ್ಯಮಾಪನ ಮತ್ತು ತನಿಖೆಯನ್ನು ನಡೆಸಲು ಇದು ಸೂಕ್ತ ಪ್ರಕರಣ ಎಂದೂ ಹೇಳಿದೆ.
ದೊಡ್ಡ ಹಗರಣಗಳಲ್ಲಿ ಒಂದು:
ಬಿಎಂಐಸಿಪಿ ಕರ್ನಾಟಕ ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಟ್ರಸ್ಟಿಯಾಗಿರುವ ರಾಜ್ಯ ಸರ್ಕಾರವೇ ಪರಿಸರ, ಜೀವ ವೈವಿಧ್ಯತೆಗೆ ಹಾನಿಯುಂಟುಮಾಡಲು ಸಂಸ್ಥೆಯನ್ನು ಬಿಟ್ಟಿದೆ. ಸರ್ಕಾರ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಸಾಂವಿಧಾನಿಕ ಆದೇಶ ಮತ್ತು ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಖಾಸಗಿ ಹಿತಾಸಕ್ತಿ ರಕ್ಷಣೆಗೆ ನೆರವು ನೀಡಿರುವುದನ್ನು ಇದು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಬೆಂಗಳೂರು ಮತ್ತು ಮೈಸೂರು ನಡುವೆ ಸುಮಾರು 111 ಕಿ.ಮೀ. ಉದ್ದದ 5 ಟೌನ್‌ಶಿಪ್‌ಗಳು ಮತ್ತು ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸುವ ಉದ್ದೇಶದಲ್ಲಿ ನೈಸ್ ಸಂಪೂರ್ಣವಾಗಿ ವಿಫಲವಾಗಿದೆ. ಆದರೂ, ರಾಜ್ಯ ಸರ್ಕಾರವು ಏಕೆ ಈ ಯೋಜನೆಯನ್ನು ಮರು ಪರಿಶೀಲಿಸುತ್ತಿಲ್ಲ ಅಥವಾ ರದ್ದುಗೊಳಿಸುತ್ತಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ. ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಎಕ್ಸ್‌ಪ್ರೆಸ್‌ವೇ ಜತೆಗೆ ಉದ್ಯೋಗ ಮತ್ತು ಬೆಳವಣಿಗೆಗೆ ಅವಕಾಶಗಳನ್ನು ಒದಗಿಸಲು ಮತ್ತು ಸೃಷ್ಟಿಸಲು ನೈಸ್ ಯೋಜನೆ ವಿಫಲವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೆರೆಗಳು, ಜಲಮೂಲಗಳು, ಜೀವ ವೈವಿಧ್ಯಗಳನ್ನು ನೈಸ್‌ಗೆ ವರ್ಗಾಯಿಸಲಾಗಿದೆ. ಇದು ಪರಿಸರ, ಜೀವವೈವಿಧ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಬೆಂಗಳೂರಿನ ನೀರು ಪೂರೈಕೆ ಸರಣಿಯನ್ನು ನಾಶಪಡಿಸುತ್ತಿದೆ ಎಂದೂ ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
Related Articles
Thank you for your comment. It is awaiting moderation.


Comments (0)