ಹಿರಿಯ ನಾಗರಿಕರ ರಕ್ಷಣೆಗೆ ಸಮಗ್ರ ಕಾಯ್ದೆ ಜಾರಿ ಬಗ್ಗೆ ಪರಿಶೀಲಿಸಿ; ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- July 24, 2026
- 6 Views
ಬೆಂಗಳೂರು: ಆರೈಕೆಯ ಅಗತ್ಯವಿರುವ ಹಿರಿಯ ನಾಗರಿಕರನ್ನು ಗುರುತಿಸಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ‘ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಮಾದರಿಯಲ್ಲಿಯೇ ಸಮಗ್ರ ಕಾಯ್ದೆ ಜಾರಿ ಮಾಡುವ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ಸೂಚಿಸಿದೆ.
ಬಲಗಾಲಿನ ಗ್ಯಾಂಗ್ರೀನ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮೈಸೂರಿನ ವೃದ್ಧ ವಿಧವೆಯೊಬ್ಬರು ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದ್ದು, ಸ್ವಹಿತಾಸಕ್ತಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ವೃದ್ಧರಿಗೆ ಸೂಕ್ತ ರಕ್ಷಣೆ ಒದಗಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದೆ.
ಹೈಕೋರ್ಟ್ ಆದೇಶವೇನು?
ಮಕ್ಕಳು ಮತ್ತು ಹಿರಿಯ ನಾಗರಿಕರು ಪ್ರತ್ಯೇಕ ಶಾಸನಬದ್ಧ ಚಿಕಿತ್ಸೆಗೆ ಅಗತ್ಯವಿರುವ ವರ್ಗಗಳಾಗಿವೆ. ಪ್ರಸ್ತುತ ಜಾರಿಯಲ್ಲಿರುವ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ-2007’ರಲ್ಲಿರುವ ನಿಯಮಗಳು ವೃದ್ಧರು ಎದುರಿಸುತ್ತಿರುವ ಶೋಷಣೆ, ನಿರ್ಲಕ್ಷ್ಯ ಮತ್ತು ವೈದ್ಯಕೀಯ ಚಿಕಿತ್ಸೆಯ ಕೊರತೆಯನ್ನು ನಿವಾರಿಸಲು ಸಾಕಾಗುತ್ತಿಲ್ಲ. ಜತೆಗೆ, ಹಿರಿಯ ನಾಗರಿಕರ ಹಕ್ಕುಗಳ ಉಲ್ಲಂಘನೆ ಸಂಬಂಧ ಇತ್ತೀಚೆಗೆ ಹೈಕೋರ್ಟ್ನಲ್ಲಿ ಸಾಕಷ್ಟು ಪ್ರಕರಣಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಹಾಗೂ ಪರಿಣಾಮಕಾರಿ ಕಾನೂನಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಪರಿಶೀಲಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ಚಿಕಿತ್ಸೆಗಾಗಿ ಅಗತ್ಯ ಹಾಸಿಗೆಗಳನ್ನು ಒದಗಿಸುವುದು, ದೀರ್ಘಕಾಲದ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಅಗತ್ಯ ಸೌಲಭ್ಯಗಳನ್ನು ವಿಸ್ತರಿಸಬೇಕಾಗಿದೆ. ಆದ್ದರಿಂದ, ಮಕ್ಕಳ ರಕ್ಷಣೆಗೆ ಇರುವ ಬಾಲ ನ್ಯಾಯ ಕಾಯ್ದೆ ಮಾದರಿಯಲ್ಲಿ ಸಮಗ್ರ ಸಾಂಸ್ಥಿಕ ಶಾಸನವೊಂದು ಜಾರಿಯಾಗಬೇಕಾಗಿದೆ. ಹೊಸ ಕಾಯ್ದೆಯಲ್ಲಿ 24 ಗಂಟೆಗಳ ತುರ್ತು ಸ್ಪಂದನಾ ವ್ಯವಸ್ಥೆ, ಸಹಾಯವಾಣಿಗಳು ಮತ್ತು ತ್ವರಿತ ತಂಡಗಳು, ತಾತ್ಕಾಲಿಕ ಆಶ್ರಯ ತಾಣಗಳು, ನೆರವಿನ ವಸತಿ ಸೌಲಭ್ಯಗಳು ಮತ್ತು ಆರೈಕೆ ಕೇಂದ್ರಗಳು, ಸಮಗ್ರ ವೃದ್ಧಾಪ್ಯ ಆರೋಗ್ಯ ಸೇವೆ, ನರ್ಸಿಂಗ್ ನೆರವು, ಮಾನಸಿಕ ಆರೋಗ್ಯ ಸೇವೆ ಮತ್ತು ಸಮಾಲೋಚನೆ, ಕಾನೂನು ನೆರವು ಮತ್ತಿತರರ ಸಂಭಾವ್ಯ ಅಂಶಗಳು ಒಳಗೊಂಡಿರಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ವೃದ್ಧೆಯ ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸಬೇಕು:
ಆಶ್ರಯವಿಲ್ಲದ ಅಥವಾ ನಿರ್ಲಕ್ಷಿಸಲ್ಪಟ್ಟವರು, ಯಾವುದೇ ಬೆಂಬಲವಿಲ್ಲದ ಮಕ್ಕಳಿಲ್ಲದ ಹಿರಿಯರು, ದೈಹಿಕ, ಮಾನಸಿಕ, ಭಾವನಾತ್ಮಕ ಅಥವಾ ಆರ್ಥಿಕ ಶೋಷಣೆಗೆ ಒಳಗಾದವರು, ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಸೂಕ್ತ ಆರೈಕೆದಾರರಿಲ್ಲದವರನ್ನು ಕಾಯ್ದೆ ವ್ಯಾಪ್ತಿಗೆ ಸೇರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಜತೆಗೆ, ಅರ್ಜಿದಾರ ವೃದ್ಧೆಯ ವೈದ್ಯಕೀಯ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಆಕೆಯನ್ನು ತಕ್ಷಣವೇ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೃದ್ಧಾಪ್ಯ ಆರೈಕೆ, ಶಸ್ತ್ರಚಿಕಿತ್ಸೆ, ಔಷಧಗಳು ಮತ್ತು ಪುನರ್ವಸತಿ ಒದಗಿಸಬೇಕು. ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಆದೇಶಿಸಿದೆ.
ಅರ್ಜಿದಾರರ ಮಗ ಮತ್ತು ಮಗಳು ತಾಯಿಯ ವೈದ್ಯಕೀಯ ಅಗತ್ಯಗಳನ್ನು ನಿರ್ಲಕ್ಷಿಸಿದ್ದಾರೆಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಅಲ್ಲದೆ, ಹೆಚ್ಚಿನ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಆಸ್ಪತ್ರೆಯು ವೃದ್ಧೆಯನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿತ್ತು. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಮಾಡಿದೆ.
ನ್ಯಾಯಾಲಯ ನೀಡಿರುವ ಇತರ ಸಲಹೆಗಳು:
• ವೃದ್ಧರ ಸಮಗ್ರ ಆರೋಗ್ಯ ರಕ್ಷಣೆ, ಶುಶ್ರೂಷಾ ನೆರವು, ಮಾನಸಿಕ ಆರೋಗ್ಯ ರಕ್ಷಣೆ.
• ಕೌನ್ಸೆಲಿಂಗ್ ಮತ್ತು ಮಾನಸಿಕ ಬೆಂಬಲ.
• ಹಿರಿಯರ ಆರೈಕೆ ಮತ್ತು ಪುನರ್ವಸತಿ ಮೇಲ್ವಿಚಾರಣೆಗೆ ಕಾನೂನು ನೆರವು ಕಾರ್ಯವಿಧಾನಗಳು ಮತ್ತು ಕೇಸ್ ವರ್ಕರ್ಗಳು.
• ರಾಜ್ಯದ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಮತ್ತು ಮನೆ ಭೇಟಿ, ಡಿಜಿಟಲ್ ಕೇಸ್ ನಿರ್ವಹಣಾ ವ್ಯವಸ್ಥೆ, ಸಾಮಾಜಿಕ ಲೆಕ್ಕ ಪರಿಶೋಧನೆಗಳ ಮೂಲಕ ದುರ್ಬಲ ಹಿರಿಯ ನಾಗರಿಕರ ಮೇಲೆ ನಿಗಾ.
• ನಿಂದನೆ, ನಿರ್ಲಕ್ಷ್ಯ ಮತ್ತು ದೌರ್ಜನ್ಯಗಳನ್ನು ವರದಿ ಮಾಡಲು ಸಮುದಾಯ ಆಧಾರಿತ ಆರೈಕೆ ಮಾದರಿಗಳು ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಅಭಿವೃದ್ಧಿ, ವಿಷಲ್-ಬ್ಲೋವರ್ಗಳ ರಕ್ಷಣೆ.
• ವೃದ್ಧರು ಮತ್ತು ಕಲ್ಯಾಣ ಯೋಜನೆಗಳ ಕುರಿತು ಎಸ್ಒಪಿ ರಚನೆ.
Related Articles
Thank you for your comment. It is awaiting moderation.


Comments (0)