ಬಂಟ್ವಾಳ ಯುವತಿ ಕೊಲೆ ಪ್ರಕರಣ, ಕೊಲೆಗಡುಕನನ್ನು ಬಿಟ್ಟು ಟ್ವೀಟ್ ಮಾಡಿದವರ ಬೆನ್ನು ಏಕೆ ಹತ್ತುತ್ತೀರಿ; ಹೈಕೋರ್ಟ್

ಬೆಂಗಳೂರು: ಕೊಲೆಗಡುಕರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೆ, ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೊ ಟ್ವೀಟ್‌ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಅದರ ತನಿಖೆಗೆ ಬೆನ್ನತ್ತುವ ಮೂಲಕ ರಾಜ್ಯ ಸರ್ಕಾರ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಹೈಕೋರ್ಟ್‌ ಮೌಖಿಕವಾಗಿ ಕಿಡಿ ಕಾರಿದೆ.

ಬಂಟ್ವಾಳ ಬಸ್‌ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆ ಹಾಗೂ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ನಗರದ ಕಾನೂನು ವಿದ್ಯಾರ್ಥಿ ಕಿರಣ್‌ ಆರಾಧ್ಯ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಆರೋಪಿಯ ಪರ ಹಾಜರಾಗಿ ವಾದ ಮಂಡಿಸಿದ ಸಂಸದ ತೇಜಸ್ವಿ ಸೂರ್ಯ, ಅರ್ಜಿದಾರರು ಮಾಡಿರುವ ಟ್ವೀಟ್‌ನಲ್ಲಿ ಯಾವುದೇ ಧರ್ಮ, ಸಮುದಾಯ, ಜಾತಿ ಅಥವಾ ಗುರುತಿಸಬಹುದಾದ ಗುಂಪಿನ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ವ್ಯಾಖ್ಯಾನ ಮತ್ತು ಊಹೆಯ ಆಧಾರದಲ್ಲಿ ಇದಕ್ಕೆ ಕೋಮು ಬಣ್ಣ ನೀಡುವ ಪ್ರಯತ್ನ ನಡೆದಿದ್ದು ಅರ್ಜಿದಾರರ ವಿರುದ್ಧ ವಿನಾಕಾರಣ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎನ್‌. ಜಗದೀಶ್‌ ಅವರು, ಕೇವಲ ಎರಡು ದಿನಗಳ ಹಿಂದಷ್ಟೇ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಇನ್ನೂ ನೋಟಿಸ್‌ ಅನ್ನೇ ಕಳುಹಿಸಿಲ್ಲ. ಆಗಲೇ ಅರ್ಜಿದಾರರು ಹೈಕೋರ್ಟ್‌ ಕದ ತಟ್ಟಿದ್ದಾರೆ ಎಂದು ಆಕ್ಷೇಪಿಸಿದರಲ್ಲದೆ, ಅರ್ಜಿದಾರರನ್ನು ರಕ್ಷಿಸುವಂತಹ ಯಾವುದೇ ಆದೇಶ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ಆಕ್ಷೇಪಣೆಯನ್ನು ತಳ್ಳಿಹಾಕಿದ ನ್ಯಾಯಪೀಠ, ನೀವು (ಸರ್ಕಾರ) ಮಾಡಬೇಕಿರುವುದೇನೆಂದರೆ, ನಿಜವಾದ ಕೊಲೆಗಡುಕನನ್ನು ಪತ್ತೆ ಹಚ್ಚಿ ತನಿಖೆ ನಡೆಸಬೇಕು. ಅದು ಮುಖ್ಯವಾಗಿ ಬೇಕಿರುವುದು. ಹಾಡು ಹಗಲೇ ಯುವತಿಯೊಬ್ಬಳನ್ನು‌ ಕೊಂದವನನ್ನು ಅರೆಸ್ಟ್ ಮಾಡಬೇಕು. ಅದನ್ನು ಬಿಟ್ಟು ಯಾರೋ ಟ್ವೀಟ್ ಮಾಡಿದಾರೆ ಎಂದು ಅವರ ಬೆನ್ನು ಹತ್ತುವ ಅಗತ್ಯವೇನಿದೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.

ಅಂತಿಮವಾಗಿ ನ್ಯಾಯಪೀಠ, ನಿಸ್ಸಂದಿಗ್ಧವಾಗಿ ಕ್ರೌರ್ಯದ ಈ ಘಟನೆ ಖಂಡನೆಗೆ ಅರ್ಹವಾದುದು. ಆದರೆ, ಅರ್ಜಿದಾರರು ತಮ್ಮ ಎಕ್ಸ್‌ನಲ್ಲಿ ಬಳಸಿರುವ ಭಾಷೆಯಿಂದ, ನಿರ್ದಿಷ್ಟ ಸಮುದಾಯವನ್ನು ಸ್ಪಷ್ಟವಾಗಿ ಗುರಿಯಾಗಿಸುವ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಉಲ್ಲೇಖ ಕಾಣಬರುತ್ತಿಲ್ಲ. ಜಾವೇದ್ ಅಹ್ಮದ್ ಹಜಮ್ ಹಾಗೂ ಮಹಾರಾಷ್ಟ್ರ ರಾಜ್ಯ, ಬಿಲಾಲ್ ಅಹ್ಮದ್ ಕಲೂ ಹಾಗೂ ಆಂಧ್ರಪ್ರದೇಶ ರಾಜ್ಯ ಮತ್ತು ಪ್ಯಾಟ್ರಿಸಿಯಾ ಮುಖಿಮ್ ಹಾಗೂ ಮೇಘಾಲಯ ರಾಜ್ಯದ ನಡುವಿನ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ಪ್ರತಿಪಾದಿಸಿದ ತತ್ವಗಳನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯದ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಯುವವರೆಗೆ, ಅರ್ಜಿದಾರರ ವಿರುದ್ಧದ ಮುಂದಿನ ತನಿಖೆಗೆ ತಡೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಜತೆಗೆ, ಪ್ರತಿವಾದಿ ರಾಜ್ಯ ಪ್ರಾಸಿಕ್ಯೂಷನ್‌ಗೆ ತುರ್ತು ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ಮುಂದೂಡಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಕಿರಣ್‌ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೂ ನ್ಯಾಯಪೀಠ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಪ್ರಕರಣವೇನು?
ಬಂಟ್ವಾಳ ಬಸ್ ನಿಲ್ದಾಣದಲ್ಲಿ ನಡೆದಿದ್ದ ಯುವತಿ ಲಾವಣ್ಯ ಕೊಲೆ ಸಂಬಂಧ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಟ್ವೀಟ್ ಮಾಡಿದ್ದ ಆರೋಪಿ ಕಿರಣ್‌ ಆರಾಧ್ಯ, “ಎಡಗೈಯಲ್ಲಿ ಕೈಗಡಿಯಾರ ಮತ್ತು ಪಾದದ ಗಂಟಿಗಿಂತ ಮೇಲ್ಭಾಗಕ್ಕೆ ಇರುವ ಪ್ಯಾಂಟ್ ಧರಿಸಿದ್ದ, ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳನ್ನು ಕೊಂದ ರಾಕ್ಷಸ” ಎಂದು ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ ಯಾವುದೇ ಅಧಿಕೃತ ತನಿಖೆಯ ಅಂತಿಮ ವರದಿ, ನ್ಯಾಯಾಲಯದ ತೀರ್ಪು ಅಥವಾ ಅಧಿಕೃತ ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸದೆ ಕಾಂಗ್ರೆಸ್‌ ಸರ್ಕಾರವು ಆರೋಪಿಯನ್ನು ಉದ್ದೇಶಪೂರ್ವಕವಾಗಿ ರಕ್ಷಿಸುತ್ತಿದೆ ಎಂಬ ಅರ್ಥ ಬರುವ ರೀತಿಯ ಹೇಳಿಕೆ ಇದೆ. ಇಂತಹ ಹೇಳಿಕೆಗಳು ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವುದರ ಜತೆಗೆ ಸಮಾಜದಲ್ಲಿ ತಪ್ಪು ಮಾಹಿತಿ ಹರಡುವುದಕ್ಕೂ ಸಾರ್ವಜನಿಕ ಶಾಂತಿ ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಕುಶಾಲ್‌ ಹರುವೆಗೌಡ ದೂರು ನೀಡಿದ್ದರು.

ದೂರು ಆಧರಿಸಿ ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 192 (ಗಲಭೆ) ಮತ್ತು 353(2) (ಸಾರ್ವಜನಿಕರಲ್ಲಿ ಗೊಂದಲ, ಭಯ ಅಥವಾ ಸುಳ್ಳು ವದಂತಿಗಳನ್ನು ಹರಡುವ ಅಪರಾಧ) ಅಡಿಯಲ್ಲಿ ಹೈಗ್ರೌಂಡ್ಸ್‌ ಮತ್ತು ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎರಡು ಎಫ್‌ಐಆರ್ ದಾಖಲಾಗಿವೆ.

Related Articles

Comments (0)

Leave a Comment