ಕೆಪಿಎಸ್ಸಿ ಅಧ್ಯಕ್ಷರ ಪುತ್ರಿಯರ ನೇಮಕಾತಿ ಪ್ರಕರಣ ಸಿಬಿಐ ತನಿಖೆಗೆ ಕೋರಿದ ಅರ್ಜಿ; ರಾಜ್ಯ ಸರ್ಕಾರಕ್ಕೆ ನೋಟಿಸ್
- by Jagan Ramesh
- July 20, 2026
- 26 Views
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರ ಅಕ್ರಮ ನೇಮಕಾತಿಗಾಗಿ ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಸಿ ವಂಚಿಸಿದ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಸಾಂವಿಧಾನಿಕ ಸಂಸ್ಥೆಯೊಂದರ ಮೇಲಿರುವ ಸಾರ್ವಜನಿಕ ನಂಬಿಕೆಯನ್ನು ಬುಡಮೇಲು ಮಾಡುವಂತಹ ಅಂಶಗಳು ಈ ಪ್ರಕರಣದಲ್ಲಿವೆ ಎಂದು ಕಳವಳ ವ್ಯಕ್ತಪಡಿಸಿದೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಬಿಐ ತನಿಖೆ ವಹಿಸಲು ಆದೇಶಿಸಬೇಕು ಹಾಗೂ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್. ಶ್ರೀಕಾಂತಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ಸಿಬಿಐ ಹಾಗೂ ವಿಧಾನಸೌಧ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತಲ್ಲದೆ, ಅಷ್ಟರೊಳಗೆ ರಾಜ್ಯ ಸರ್ಕಾರವೇನಾದರೂ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ, ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವರ್ಗಾಯಿಸಲು ಮುಂದಾದರೆ, ಅರ್ಜಿದಾರರು ತಕ್ಷಣವೇ ನ್ಯಾಯಾಲಯದ ಕದ ತಟ್ಟಲು ಮುಕ್ತ ಅವಕಾಶ ಹೊಂದಿದ್ದಾರೆ ಎಂದು ಆದೇಶಿಸಿತು.
ಸಾರ್ವಜನಿಕರ ವಿಶ್ವಾಸಾರ್ಹತೆಗೆ ಧಕ್ಕೆ; ಕೋರ್ಟ್ ಕಳವಳ:
ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ ಹಾಗೂ ಗಿರೀಶ್ ಭಾರದ್ವಾಜ್ ಅವರ ವಾದ ಆಲಿಸಿದ ಬಳಿಕ ನ್ಯಾಯಪೀಠ, ಅರ್ಜಿಯಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಒಂದು ಕಣದಷ್ಟು ಸತ್ಯಾಂಶವಿದ್ದರೂ, ರಾಜ್ಯದ ನಾಗರಿಕ ಸೇವೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡುವ ಅತ್ಯಂತ ಪವಿತ್ರವಾದ ಸಾರ್ವಜನಿಕ ಕಾರ್ಯದ ಜವಾಬ್ದಾರಿ ಹೊತ್ತಿರುವ ಒಂದು ಸಾಂವಿಧಾನಿಕ ಸಂಸ್ಥೆಯ ಪಾವಿತ್ರ್ಯತೆಗೇ ಧಕ್ಕೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಸಿತು.
ಪ್ರಕರಣದಲ್ಲಿನ ಆರೋಪಗಳು ಅಂತಿಮವಾಗಿ ಪರಿಶೀಲನೆಗೆ ಒಳಪಟ್ಟು ನಿಜವೆಂದು ಸಾಬೀತಾದರೆ, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯೊಂದರ ಮುಖ್ಯಸ್ಥರು ಇಷ್ಟು ಅತ್ಯಲ್ಪ ಆದಾಯವನ್ನು (ವಾರ್ಷಿಕ 40 ಸಾವಿರ ರೂ.) ತೋರಿಸಿರುವುದಕ್ಕಿಂತ ಮಿಗಿಲಾದ ಆತಂಕಕಾರಿ ವಿಷಯ ಮತ್ತೊಂದಿರುವುದಿಲ್ಲ. ಮೇಲ್ನೋಟಕ್ಕೆ ಇಂತಹ ಪ್ರತಿಪಾದನೆಯು ಕೇವಲ ಅಪನಂಬಿಕೆ ಹುಟ್ಟುಹಾಕುವುದಲ್ಲದೆ, ಇಡೀ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸಾಂಸ್ಥಿಕ ಪಾವಿತ್ರ್ಯತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಸಾಂವಿಧಾನಿಕ ಸಂಸ್ಥೆಗಳು ಕೇವಲ ಸಂವಿಧಾನದ ಪಠ್ಯದಿಂದ ತಮ್ಮ ಕಾನೂನುಬದ್ಧತೆ ಪಡೆಯುವುದಿಲ್ಲ. ಬದಲಿಗೆ ಸಾರ್ವಜನಿಕರಲ್ಲಿ ಅವು ಮೂಡಿಸಬಹುದಾದ ಅಚಲ ವಿಶ್ವಾಸದಿಂದ ಪಡೆದುಕೊಳ್ಳುತ್ತವೆ. ಆ ವಿಶ್ವಾಸಕ್ಕೆ ಧಕ್ಕೆ ತರುವಂಥ ಯಾವುದೇ ಆರೋಪಗಳನ್ನು ಗಂಭೀರವಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಪ್ರಕರಣ ಸಂಬಂಧ 2026ರ ಜುಲೈ 3ರಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆ ದೂರಿನ ಕುರಿತು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿ, ಹೆಚ್ಚಿನ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಆನಂತರ ಆ ಮಾಹಿತಿಯನ್ನು ಕೆಪಿಎಸ್ಸಿಯೊಂದಿಗೆ ಹಂಚಿಕೊಳ್ಳಲಾಗಿತ್ತು. ಇದಾದ ನಂತರವೇ ಕೆಪಿಎಸ್ಸಿ ಸ್ವತಃ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಬಿಎನ್ಎಸ್ ಸೆಕ್ಷನ್ಗಳಾದ 336(2), 336(3) ಮತ್ತು 340(2) ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿವರಿಸಿದರು.
ಮುಂದುವರಿದು, ಈ ಎಫ್ಐಆರ್ ಕೇವಲ ತೋರಿಕೆಯ ತಂತ್ರವೇ ಹೊರತು ಮತ್ತೇನೂ ಅಲ್ಲ. ಕೆಪಿಎಸ್ಸಿ ಸ್ಪಂದಿಸುತ್ತಿದೆ ಎಂಬ ಭ್ರಮೆಯನ್ನು ಸೃಷ್ಟಿಸಲು ಮತ್ತು ನೈಜ ಆರೋಪಗಳನ್ನು ಮುಟ್ಟದೆ ಹಾಗೇ ಬಿಡಲು ಮಾಡಿದ ಕಣ್ಣೊರೆಸುವ ತಂತ್ರವಾಗಿದೆ. ಕೆಪಿಎಸ್ಸಿಯಲ್ಲಿ ನಡೆದಿರುವ ಈ ಹಿಂದಿನ ವಿವಾದಗಳ ಸರಣಿ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಕರಣದ ತನಿಖೆಯನ್ನು ರಾಜ್ಯ ತನಿಖಾ ಸಂಸ್ಥೆಯಿಂದ ಹಿಂಪಡೆದು, ಕೇಂದ್ರೀಯ ತನಿಖಾ ದಳಕ್ಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರಲ್ಲದೆ, ಸಾರ್ವಜನಿಕ ಆಕ್ರೋಶವನ್ನು ತಣಿಸುವ ಪ್ರಯತ್ನವಾಗಿ ರಾಜ್ಯ ಸರ್ಕಾರ ಎಸ್ಐಟಿ ರಚನೆಗೆ ಮುಂದಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಅರ್ಜಿದಾರರ ಮನವಿ:
ಪ್ರಕರಣದ ಸಂಬಂಧ ಕಾಂತಕುಮಾರ್ ಅವರು ನಾಲ್ಕು ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ , ಕೆಪಿಎಸ್ಸಿ ಸಹಾಯಕ ಕಾರ್ಯದರ್ಶಿ ನೀಡಿರುವ ದೂರು ಆಧರಿಸಿ ವಿಧಾನಸೌಧ ಠಾಣೆ ಪೊಲೀಸರು ಜನವರಿ 13ರಂದು ಖಾಸಗಿ ವ್ಯಕ್ತಿಯಾದ ಸುಮಾ ಎಸ್. ಸಾಹುಕಾರ್ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯ ನಿಯಮಗಳನನ್ನು ಸೇರಿಸಿಲ್ಲ. ಅಪರಾಧಿಕ ಒಳಸಂಚು ಅಪರಾಧ ಸೇರಿಸಿಲ್ಲ. ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಆರೋಪಿಯನ್ನಾಗಿ ಮಾಡಿಲ್ಲ. ಆದ್ದರಿಂದ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Related Articles
Thank you for your comment. It is awaiting moderation.


Comments (0)