ಕೋರ್ಟ್ ಆದೇಶ ಮುಚ್ಚಿಟ್ಟ ಮಹಿಳಾ ಪಿಎಸ್‌ಐ; 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
- by Prashanth Basavapatna
- June 9, 2026
- 4 Views
ಬೆಂಗಳೂರು: ರಸ್ತೆಯಲ್ಲಿ ನಡೆದಿದ್ದ ಜಗಳದ (ರೋಡ್ ರೇಜ್) ಸಂಬಂಧ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳಾ ವಕೀಲೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮಹಿಳಾ ಸಬ್ಇನ್ಸ್ಪೆಕ್ಟರ್ ಒಬ್ಬರು ನ್ಯಾಯಾಲಯದ ಹಿಂದಿನ ಆದೇಶ ಮರೆಮಾಚಿ ರಜಾ ಕಾಲದ ನ್ಯಾಯಪೀಠದಿಂದ ತನಿಖೆಗೆ ತಡೆಯಾಜ್ಞೆ ಪಡೆದುಕೊಂಡಿದ್ದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಹಿಳಾ ಪಿಎಸ್‌ಐಗೆ 1 ಲಕ್ಷ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದ್ದು, ದಂಡದ ಮೊತ್ತವನ್ನು ಮುಂದಿನ 8 ವಾರಗಳಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಪಾವತಿಸುವಂತೆ ರ್ನಿದೇಶನ ನೀಡಿದೆ.
ಮಹಿಳಾ ಪಿಎಸ್‌ಐ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅಷ್ಟಕ್ಕೂ ಆಕೆ ತಮ್ಮನ್ನು ತಾವೇನಂದುಕೊಂಡಿದ್ದಾರೆ? ಈ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ನೀಡಿದ್ದ ಆದೇಶವನ್ನು ಅರ್ಜಿಯಲ್ಲಿ ಉಲ್ಲೇಖಿಸದೆ ರಜಾಕಾಲದ ಪೀಠದ ಮುಂದೆ ಮುಚ್ಚಿಟ್ಟಿರುವುದು ಸತ್ಯದ ಮರೆಮಾಚುವಿಕೆ ಅಲ್ಲವೇ? ಇದಕ್ಕಾಗಿಯೇ ದಂಡ ವಿಧಿಸುತ್ತಿರುವುದಾಗಿ ತಿಳಿಸಿತು.
ಇದೇ ವೇಳೆ, ಆರೋಪಿತ ಮಹಿಳಾ ಪಿಎಸ್‌ಐ ವಿರುದ್ಧ ಇಲಾಖಾ ತನಿಖೆ ಪ್ರಾರಂಭಿಸಲಾಗಿದಿಯೇ? ಎಫ್ಐಆರ್ ದಾಖಲಿಸಲಾಗಿದಿಯೇ? ಎಂದು ವಿಚಾರಣೆ ವೇಳೆ ಹಾಜರಿದ್ದ ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ಪೀಠ, ತನಿಖೆಯನ್ನು ತಕ್ಷಣ ಮುಂದುವರಿಸಿ, ಅಂತಿಮ ವರದಿ ಸಲ್ಲಿಸುವ ಮುನ್ನ ತನಿಖಾ ವರದಿಯನ್ನು ಈ ನ್ಯಾಯಾಲಯದ ಮುಂದಿಡಬೇಕು ಎಂದು ನಿರ್ದೇಶಿಸಿತು.
ತಡೆಯಾಜ್ಞೆ ತರುವ ತುರ್ತು ಏನಿತ್ತು?
ಪ್ರಕರಣ ಸಂಬಂಧ ಆರೋಪಿತ ಪಿಎಸ್‌ಐ, ವಕೀಲೆಯೊಬ್ಬರನ್ನು ಬೂಟ್ ಕಾಲಿನಿಂದ ಒದ್ದಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಗಳಲ್ಲಿ ಗೊತ್ತಾಗುತ್ತಿದೆ. ಕೇವಲ ಮೇಜಿನ ಮೇಲಿದ್ದ ಕಡತಗಳನ್ನು ತಳ್ಳಿದ ಕಾರಣಕ್ಕೆ ಈ ರೀತಿಯಲ್ಲಿ ವರ್ತಿಸಿದ್ದಾರೆ. ಅದಕ್ಕೆ ಕಾನೂನಿನಲ್ಲಿ ಅವಕಾಶ ನೀಡಲಾಗಿದಿಯೇ? ರಜಾಕಾಲದ ನ್ಯಾಯಪೀಠಕ್ಕೆ ಹೋಗಿ ತಡೆಯಾಜ್ಞೆ ತರಲು ತುರ್ತು ಏನಿತ್ತು? ಎಂದು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿದ ಪೀಠ, ಮುಂದೊಂದು ದಿನ ನಿಮಗೂ ಇದೇ ಸ್ಥಿತಿ ಬರಬಹುದು ಎಂದು ಮಾರ್ಮಿಕವಾಗಿ ನುಡಿಯಿತು.
ಈ ನ್ಯಾಯಾಲಯದ ಆದೇಶವನ್ನು ಮರೆಮಾಚಿ ರಜಾಕಾಲದ ಪೀಠದಕ್ಕೆ ಯಾವ ಕಾರಣಕ್ಕಾಗಿ ಅರ್ಜಿ ಸಲ್ಲಿಸಬೇಕಾಯಿತು. ನಿಮ್ಮ ಕ್ರಮವನ್ನು ಇದೇ ನ್ಯಾಯಪೀಠದ ಮುಂದೆ ಸಮರ್ಥನೆ ಮಾಡಿಕೊಂಡು ತನಿಖೆಗೆ ತಡೆ ಕೋರಬಹುದಿತ್ತಲ್ಲವೇ? ಇದೇ ನ್ಯಾಯಪೀಠದಲ್ಲಿ ವಾದ ಮಂಡಿಸಿ, ತಡೆಯಾಜ್ಞೆ ಪಡೆಯಬಹುದಾಗಿತ್ತು. ಆಗ ನಿಮ್ಮ ಕ್ರಮವನ್ನು ಪ್ರಶಂಸಿಸುತ್ತಿದ್ದೆ. ಆದರೆ, ಈ ಪೀಠದ ಆದೇಶ ಮರೆ ಮಾಚಿ ರಜಾಕಾಲದ ಪೀಠಕ್ಕೆ ಹೋಗಿದ್ದೀರಿ. ಈ ರೀತಿಯ ಬೆಂಬಲ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅರ್ಜಿಯಲ್ಲಿ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಅರ್ಜಿಯನ್ನು ಸಿದ್ದಪಡಿಸಿದ್ದು ಯಾರು? ಬೇರೆ ಯಾವುದೋ ಪ್ರಕರಣದ ವಿವರಗಳನ್ನು ಇಲ್ಲಿ ಕಾಪಿ-ಪೇಸ್ಟ್ ಮಾಡಲಾಗಿದೆಯೇ? ಒದ್ದಿರುವುದಕ್ಕೂ ಇವರಿಗೂ ಏನು ಸಂಬಂಧ? ಎಂಬುದನ್ನು ತಿಳಿಸಿಲ್ಲ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಪ್ರಕರಣವೇನು?
ರಸ್ತೆ ಜಗಳದ ಸಂತ್ರಸ್ತೆಯಾಗಿದ್ದ ಮಹಿಳಾ ವಕೀಲೆಯೊಬ್ಬರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ತಾಸುಗಟ್ಟಲೆ ಕಾಯಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ವಕೀಲೆ ಮೇಜಿನ ಮೇಲಿದ್ದ ಕಡತಗಳನ್ನು ಕೆಳಗೆ ತಳ್ಳಿದ್ದರು. ಈ ವೇಳೆ ಅಲ್ಲಿಗೆ ಬಂದ ಮಹಿಳಾ ಪಿಎಸ್‌ಐ, ವಕೀಲರ ಮೇಲೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಒದ್ದಿದ್ದರು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಈ ಸಂಬಂಧ ದಾಖಲಾಗಿದ್ದ ಎಫ್ಐಆರ್ ರದ್ದುಕೋರಿ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿದಾರ ವಕೀಲೆಯ ವಿರುದ್ಧದ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿತ್ತಲ್ಲದೆ, ಬೂಟ್ ಕಾಲಿನಿಂದ ಒದ್ದಿದ್ದ ಮಹಿಳಾ ಪಿಎಸ್‌ಐ ವಿರುದ್ಧವೂ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಜತಗೆ, ಇಲಾಖಾ ತನಿಖೆ ನಡೆಸಬೇಕು ಎಂದು ನಿರ್ದೇಶಿಸಿತ್ತು. ಆದರೆ, ಮಹಿಳಾ ಪಿಎಸ್‌ಐ ಈ ಆದೇಶದ ಪ್ರತಿಯನ್ನು ಲಗತ್ತಿಸದೇ, ಸತ್ಯ ಮರೆಮಾಚಿ ರಜಾಕಾಲದ ನ್ಯಾಯಪೀಠದಿಂದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡಿದ್ದರು.
Related Articles
Thank you for your comment. It is awaiting moderation.



Comments (0)