ರೇಣುಕಾಸ್ವಾಮಿ ಕೊಲೆ ಪ್ರಕರಣ; ಐವರು ಆರೋಪಿಗಳ ಜಾಮೀನು ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
- by Jagan Ramesh
- June 10, 2026
- 601 Views
ಬೆಂಗಳೂರು: ನಟ ದರ್ಶನ್, ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಹ ಆರೋಪಿಗಳಾದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಸೇರಿ ಐವರಿಗೆ ಮಂಜೂರಾಗಿರುವ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ (ಪ್ರಾಸಿಕ್ಯೂಷನ್) ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಜಾಮೀನು ರದ್ದು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
ಪ್ರಕರಣದ 10ನೇ ಆರೋಪಿ ವಿ. ವಿನಯ್, ಪವಿತ್ರಾ ಗೌಡ ಸಹಾಯಕ ಪುಟ್ಟಸ್ವಾಮಿ ಅಲಿಯಾಸ್ ಕೆ. ಪವನ್ (3ನೇ ಆರೋಪಿ), ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ಎನ್. ರಾಘವೇಂದ್ರ (4ನೇ ಆರೋಪಿ), ನಂದೀಶ್ (5ನೇ ಆರೋಪಿ), ಧನರಾಜ್ ಅಲಿಯಾಸ್ ರಾಜು ಅಲಿಯಾಸ್ ಡಿ. ಧನರಾಜುಗೆ (9ನೇ ಆರೋಪಿ) ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ 2024ರ ಡಿಸೆಂಬರ್ 24ರಂದು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಕಾಮಾಪಾಳ್ಯ ಪೊಲೀಸರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಮಧ್ಯೆ 2025ರ ಆಗಸ್ಟ್ 14ರಂದು ಸುಪ್ರೀಂಕೋರ್ಟ್ 2ನೇ ಆರೋಪಿ ದರ್ಶನ್, 1ನೇ ಆರೋಪಿ ಪವಿತ್ರಾ ಗೌಡ, 11ನೇ ಆರೋಪಿ ಆರ್. ನಾಗರಾಜು, 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು, 12ನೇ ಆರೋಪಿ ಡ್ರೈವರ್ ಎಂ. ಲಕ್ಷ್ಮಣ್, 6ನೇ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ, 14ನೇ ಆರೋಪಿ ಪ್ರದೂಷ್ ಎಸ್. ರಾವ್ ಅಲಿಯಾಸ್ ಪ್ರದೂಷ್‌ಗೆ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಿತ್ತು. ಇದನ್ನು ಆಧರಿಸಿ ರಾಜ್ಯ ಸರ್ಕಾರ ಪವನ್, ವಿನಯ್ ಮತ್ತಿತರ ಜಾಮೀನು ರದ್ದತಿಗೆ ಮನವಿ ಮಾಡಿತ್ತು.
Related Articles
Thank you for your comment. It is awaiting moderation.


Comments (0)