‘ಹೇಳಿ ಹೋಗು ಕಾರಣ’ ನಕಲಿ ಪ್ರತಿಗಳ ಮಾರಾಟ ಆರೋಪ; ಅಮೆಜಾನ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಪತ್ರಕರ್ತ ದಿ. ರವಿ ಬೆಳಗೆರೆ ರಚನೆಯ ‘ಹೇಳಿ ಹೋಗು ಕಾರಣ’ ಕಾದಂಬರಿಯನ್ನು ನಕಲು ಮಾಡಿ ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದ ಅಮೆಜಾನ್‌ ಸೆಲ್ಲರ್ಸ್‌ ಸರ್ವೀಸಸ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠದ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿತಲ್ಲದೆ, ಪ್ರತಿವಾದಿಗಳಾದ ಸುಬ್ರಹ್ಮಣ್ಯಪುರ ಪೊಲೀಸರು ಹಾಗೂ ದೂರುದಾರೆ ಭಾವನಾ ಬೆಳಗೆರೆಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್‌ ಮೂರನೇ ವಾರಕ್ಕೆ ಮುಂದೂಡಿತು.

ಅಮೆಜಾನ್ ವಾದವೇನು?
ವಿಚಾರಣೆ ವೇಳೆ ಅಮೆಜಾನ್‌ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿ, ಅರ್ಜಿದಾರ ಸಂಸ್ಥೆಯು ಒಂದು ಮಧ್ಯಸ್ಥಿಕೆ ಸಂಸ್ಥೆಯಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 79ರ ಅಡಿ ರಕ್ಷಣೆ ಒದಗಿಸಲಾಗಿದೆ. ಮಾರಾಟಗಾರರು ಮತ್ತು ಖರೀದಿದಾರರಿಗೆ ವೇದಿಕೆಯಾಗಿ ಅಮೆಜಾನ್‌ ಕೆಲಸ ಮಾಡುತ್ತದೆ. ಸೆಕ್ಷನ್‌ 79 ಮಧ್ಯಸ್ಥಿಕೆ ಸಂಸ್ಥೆಗಳಿಗೆ ಸುರಕ್ಷಿತ ತಾಣವಾಗಿದೆ. ಅನಾಮಿಕ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡುವ ಬದಲಿಗೆ ಮಧ್ಯಸ್ಥಿಕೆ ಸಂಸ್ಥೆಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದರು.

ಪುಸ್ತಕ ಮಾರಾಟಗಾರರಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ತನಿಖಾಧಿಕಾರಿಗೆ ಹಂಚಿಕೆ ಮಾಡಲಾಗಿದೆ. ಹೆಸರು, ಇಮೇಲ್‌ ಐಡಿ, ಮೊಬೈಲ್‌ ನಂಬರ್‌, ಮೊದಲ ಮತ್ತು ಕೊನೆಯ ಮಾರಾಟದ ದಿನಾಂಕ, ಎಷ್ಟು ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿಯನ್ನೂ ವಿವರಿಸಲಾಗಿದೆ. ಮೂರನೇ ವ್ಯಕ್ತಿಗಳು ತಮ್ಮ ಉತ್ಪನ್ನವನ್ನು ಪಟ್ಟಿ ಮಾಡಿ, ದರ ನಿಗದಿ ಮಾಡುತ್ತಾರೆ. ಅಮೆಜಾನ್‌ ಉತ್ಪನ್ನಗಳ ಪಟ್ಟಿ ಮಾಡಿ, ಮಾರಾಟಕ್ಕೆ ಅನುಕೂಲ ಮಾಡಿಕೊಡುತ್ತದೆಯಷ್ಟೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರಕರಣವೇನು?
ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ 2026ರ ಫೆಬ್ರವರಿ 4ರಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿ, ಭಾವನಾ ಪ್ರಕಾಶನದ ಮೂಲಕ ಪ್ರಕಟಿಸಲಾದ ನನ್ನ ತಂದೆ ರವಿ ಬೆಳಗೆರೆ ರಚನೆಯ ‘ಹೇಳಿ ಹೋಗು ಕಾರಣ’ ಪುಸ್ತಕವು 2003ರ ಸೆಪ್ಟೆಂಬರ್‌ನಲ್ಲಿ ಮೊದಲ ಪ್ರಕಟಣೆ ಕಂಡಿತ್ತು. ಈ ಕೃತಿಯ 31ನೇ ಮುದ್ರಣ ಏಪ್ರಿಲ್‌ 2005ರಲ್ಲಿ ಆಗಿದೆ. ಪುಸ್ತಕದ ಸಂಪೂರ್ಣ ಹಕ್ಕು ಸ್ವಾಮ್ಯ ನಮ್ಮದೇ ‘ಭಾವನಾ ಪ್ರಕಾಶನ’ಕ್ಕೆ ಸೇರಿದೆ. ಮುದ್ರಣ ಮಾರಾಟ ಮತ್ತು ವಿತರಣೆ ಮಾಡುವ ಏಕೈಕ ಕಾನೂನು ಬದ್ಧ ಹಕ್ಕು ಪ್ರಕಾಶನಕ್ಕೆ ಸೇರಿದೆ. ಆದರೆ, ಇತ್ತೀಚೆಗೆ ಕೆಲವರು ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮೀಶೊ ಎಂಬ ಕಂಪನಿಗಳು ಪುಸ್ತಕವನ್ನು ನಕಲು ಮಾಡಿ, ನಮ್ಮಿಂದ ಯಾವುದೇ ಅನುಮತಿ ಪಡೆಯದೇ ತಮ್ಮ ಆ್ಯಪ್‌ಗಳ ಮೂಲಕ ಅಕ್ರಮವಾಗಿ ರಿಯಾಯಿತಿ ನೆಪದಲ್ಲಿ ಮೂಲ ಬೆಲೆಗಿಂತ (ಪ್ರಸ್ತುತ 350 ರೂ.) ಕಡಿಮೆ ದರದಲ್ಲಿ 149 ರೂ.ಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಿದ್ದರು.

ಪುಸ್ತಕದ ಅಕ್ರಮ ಮಾರಾಟದಿಂದ ಭಾವನಾ ಪ್ರಕಾಶನಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಲೇಖಕರ ಹಕ್ಕುಗಳಿಗೆ ಧಕ್ಕೆಯಾಗಿದೆ. ಇದು ಕಾಪಿರೈಟ್‌ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆಯೂ ಆಗಿದೆ ಎಂದು ದೂರಿನಲ್ಲಿ ಆಕ್ಷೇಪಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಮೀಶೊ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ, ಈ ಪ್ರಕರಣ ರದ್ದುಕೋರಿ ಅಮೆಜಾನ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

Related Articles

Comments (0)

Leave a Comment