ಉದ್ದೇಶಿತ ಬೀಜ ಕಾಯ್ದೆಯಡಿ ಪರವಾನಗಿಗೆ ಒತ್ತಾಯ ಬೇಡ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by LegalSamachar
- May 15, 2026
- 9 Views
ಬೆಂಗಳೂರು: ಕೇಂದ್ರ ಸರ್ಕಾರದ ಉದ್ದೇಶಿತ ‘ಬೀಜಗಳ ವಿಧೇಯಕ- 2025’ರ ಅನ್ವಯ ಹೊಸ ಪರವಾನಗಿ ಪಡೆಯುವಂತೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೀಜದ ಸಗಟು, ಚಿಲ್ಲರೆ ಮಾರಾಟ ಮತ್ತು ವಿತರಕರಿಗೆ ಒತ್ತಾಯಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಇನ್ನೂ ಜಾರಿಗೆಯಾಗಿರದ ‘ಬೀಜಗಳ ಕಾಯ್ದೆ- 2025’ರ (ವಿಧೇಯಕ ರೂಪದಲ್ಲಿರುವ) ಪ್ರಕಾರ ಹೊಸ ಪರವಾನಗಿ ಪಡೆಯುವಂತೆ ರಾಜ್ಯ ಸರ್ಕಾರದ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಸುವರ್ಣ ಹೈಬ್ರೀಡ್ ಸೀಡ್ಸ್ ಪ್ರೈ. ಲಿ. ಕಂಪನಿ ಸೇರಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೀಜದ ಮಾರಾಟ, ವಿತರಣೆ ಹಾಗೂ ಜಾಹೀರಾತು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಎಂಟು ಕಂಪನಿಗಳು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದವು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಬೀಜಗಳ ವಿಧೇಯಕ- 2025’ ಅಂತಿಮಗೊಂಡು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ಸರ್ಕಾರದ ಪರ ವಕೀಲರು ನೀಡಿರುವ ಮಾಹಿತಿಯಂತೆ ಇನ್ನೂ ವಿಧೇಯಕವು ಅನುಮೋದನೆ ಪಡೆದು ಅಂಗೀಕಾರಗೊಂಡಿಲ್ಲ. ಆದ್ದರಿಂದ, ಜಾರಿಗೆ ಬಾರದ ವಿಧೇಯಕ ಅನ್ವಯ ಯಾವುದೇ ಪರವಾನಗಿ ಪಡೆಯುವಂತೆ ಅರ್ಜಿದಾರರಿಗೆ ಒತ್ತಾಯಿಸಬಾರದು ಎಂದು ಆದೇಶಿಸಿತು.
ಜತೆಗೆ, ಅರ್ಜಿದಾರರ ಚಟುವಟಿಕೆಯನ್ನು ಅಸ್ತಿತ್ವದಲ್ಲಿರುವ ಶಾಸನಬದ್ಧ ಚೌಕಟ್ಟಿನ ಪ್ರಕಾರ ಅಂದರೆ, ಬೀಜಗಳ ನಿಯಂತ್ರಣ ಆದೇಶ–1983ರ ಅಡಿಯಲ್ಲಿ ನೀಡಲಾದ ಪರವಾನಗಿ ಅನುಸಾರವೇ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
Related Articles
Thank you for your comment. It is awaiting moderation.



Comments (0)