ಘನತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು ಲಂಚಕ್ಕೆ ಬೇಡಿಕೆ ಆರೋಪ; ಗುತ್ತಿಗೆದಾರನಿಂದ ಹೈಕೋರ್ಟ್ಗೆ ಅರ್ಜಿ
- by Prashanth Basavapatna
- April 23, 2026
- 135 Views
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಘನ ತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ (ಬಿಎಸ್ಡಬ್ಲ್ಯೂಎಂಎಲ್) ಮುಖ್ಯ ಕಾರ್ಯಕಾರಿ ಇಂಜಿನಿಯರ್ ಕರಿಗೌಡ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಅವರ ವಿರುದ್ದ ಎಫ್ಐಆರ್ ದಾಖಲಿಸಲು ನಿರ್ದೇಶಿಸುವಂತೆ ಕೋರಿ ಗುತ್ತಿಗೆದಾರ ಎಸ್.ಎನ್. ಬಾಲಸುಬ್ರಮಣಿಯನ್ ಎಂಬುವವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ನಗರ ಸ್ವಚ್ಚತೆ, ಲಾರಿ ಮಾಲೀಕರ ಹಾಗೂ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಾಲಸುಬ್ರಮಣಿಯನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಆರೋಪಿಸಿರುವಂತೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟಿರುವುದನ್ನು ಪ್ರಮಾಣೀಕರಿಸಿ ಪ್ರಮಾಣಪತ್ರ ಸಲ್ಲಿಸುವುದಾಗಿ ಅರ್ಜಿದಾರರು ತಿಳಿಸಿದ್ದನ್ನು ಪರಿಗಣಿಸಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ಶಾಂತಿನಗರ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ಯಾಕೇಜ್ -2, ಸಿ.ವಿ.ರಾಮನ್ ನಗರ ಪ್ಯಾಕೇಜ್ -1 , ಹಾಗೂ ದಾಸರಹಳ್ಳಿ ಪ್ಯಾಕೇಜ್ -3ಗೆ ಅರ್ಜಿದಾರರು ಸಲ್ಲಿಸಿದ ಎಲ್1 ಬಿಡ್ ಅಂಗೀಕರಿಸಿದ್ದರು. ಆದರೆ, ಕರಿಗೌಡ ಅವರು ಕಚೇರಿಗೆ ಅರ್ಜಿದಾರರನ್ನು ಕರೆದು ಮಾರ್ಚ್ 10 ರಂದು ಕೆಲ ಬಾದ್ಯತೆಗಳನ್ನು ಪೂರೈಸುವಂತೆ ಹೇಳಿದರು. ಅಂದರೆ ಹಣ ನೀಡಬೇಕು. ಇಲ್ಲವಾದರೆ ತುಷಾರ್ ಗಿರಿನಾಥ್ ಟೆಂಡರ್ ಅಂತಿಮಗೊಳಿಸುವುದಿಲ್ಲ ಎಂಬುದಾಗಿ ತಿಳಿಸಿದರು ಎಂದು ಆರೋಪಿಸಿದರು.
ಮುಂದುವರಿದು, ಏಳು ವರ್ಷದ ಗುತ್ತಿಗೆಗೆ ಸರ್ಕಾರ ಹಾಗೂ ನಗರಾಭಿವೃದ್ದಿ ಇಲಾಖೆಗೆ ಶೇ.15 ಲಂಚ ನೀಡಬೇಕೆಂದು ಕೇಳಿದರು. ಲಂಚ ನೀಡದಿದ್ದರೆ ಅರ್ಜಿದಾರರ ಇತರ ಗುತ್ತಿಗೆಗಳನ್ನು ರದ್ದುಪಡಿಸುತ್ತೇವೆಂದು ಬೆದರಿಸಿದ್ದಾರೆ. ಈ ಬಗ್ಗೆ ಮಾರ್ಚ್ 11ರಂದು ಮುಖ್ಯ ಕಾರ್ಯದರ್ಶಿಗೆ ದೂರನ್ನೂ ನೀಡಲಾಗಿದೆ. ಅಂತಿಮವಾಗಿ ಲಂಚದ ಬೇಡಿಕೆಗೆ ಒಪ್ಪದಿದ್ದಕ್ಕೆ ಜುಲೈ 30ರಂದು ಕರೆಯಲಾಗಿದ್ದ ಟೆಂಡರ್ ಹಿಂಪಡೆದು ಹೊಸ ಟೆಂಡರ್ ಪ್ರಕಟಿಸಿ 2026ರ ಮಾರ್ಚ್ 25ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ, ಟೆಂಡರ್ ಅಧಿಸೂಚನೆ ರದ್ದುಪಡಿಸಬೇಕು. ಅಧಿಕಾರದ ದುರುಪಯೋಗ ಮಾಡಿ, ಟೆಂಡರ್ ಅಧಿಸೂಚನೆ ಹಿಂಪಡೆದ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿದರು.
ಈ ವಾದವನ್ನು ತೀವ್ರವಾಗಿ ಆಕ್ಷೇಪಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಅರ್ಜಿದಾರರು ಗುತ್ತಿದಾರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮಾರ್ಚ್ 10ರಂದು ಅವರು ಬೆಂಗಳೂರಿನಲ್ಲಿರಲಿಲ್ಲ, ದೆಹಲಿಯಲ್ಲಿದ್ದರು. ಆ ದಿನ ದೆಹಲಿಯಲ್ಲಿದ್ದ ಬಗ್ಗೆ ವಿಮಾನ ಪ್ರಯಾಣದ ಬೋರ್ಡಿಂಗ್ ಪಾಸ್ ಇದೆ. ಹಿರಿಯ ಐಎಎಸ್ ಅಧಿಕಾರಿಗಳ ಮೇಲೆಯೇ ಸುಳ್ಳು ಆರೋಪ ಮಾಡಿರುವುದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಅರ್ಜಿದಾರರ ಪರ ವಕೀಲರು, ಮಾರ್ಚ್ 10ರಂದು ಖುದ್ದಾಗಿ ಭೇಟಿ ಮಾಡಿದಾಗ ಲಂಚ ಕೇಳಿದರು ಎಂದು ಹೇಳಿಲ್ಲ. ಅರ್ಜಿದಾರರು ಯಾವುದೇ ರೀತಿಯ ತನಿಖೆಗೂ ಸಿದ್ಧವಿದ್ದೇವೆ. ಅರ್ಜಿಯಲ್ಲಿ ತಿಳಿಸಿರುವ ವಿಚಾರಗಳನ್ನು ನಾವು ಬದ್ಧವಾಗಿದ್ದೇವೆ. ಅದನ್ನು ದೃಢೀಕರಿಸಿ ಪ್ರಮಾಣಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)