ಬಿಜೆಪಿ ಮುಖಂಡನ ಪುತ್ರನ ವಿರುದ್ಧದ ಅತ್ಯಾಚಾರ ಪ್ರಕರಣ: ಸಂತ್ರಸ್ತೆಗೆ ಜೀವನಾಂಶ ನೀಡುವ ಕುರಿತು ನಿರ್ಧಾರ ತಿಳಿಸಲು ಆರೋಪಿಗೆ ಹೈಕೋರ್ಟ್ ಸೂಚನೆ
- by Jagan Ramesh
- April 23, 2026
- 3 Views
ಬೆಂಗಳೂರು: ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿ ಮಾಡಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಸಂತ್ರಸ್ತ ಯುವತಿ ಹಾಗೂ ಆಕೆಯ ಮಗುವಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡುವ ಕುರಿತು ನಿರ್ಧಾರ ತಿಳಿಸುವಂತೆ ಕೃಷ್ಣರಾವ್‌ಗೆ ಸೂಚಿಸಿದೆ.
ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ ಈ ಸೂಚನೆ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ (ಏಪ್ರಿಲ್ 24) ಮುಂದೂಡಿದೆ.
ಆರೋಪಿಯ ವಾದವೇನು?
ಅರ್ಜಿ ವಿಚಾರಣೆ ವೇಳೆ ಆರೋಪಿ ಕೃಷ್ಣ ಜೆ. ರಾವ್ ಪರ ವಕೀಲರು ಹಾಜರಾಗಿ, ಅರ್ಜಿದಾರ ಹಾಗೂ ಸಂತ್ರಸ್ತೆ 9ನೇ ತರಗತಿ ಇದ್ದಾಗಿನಿಂದ ಸುಮಾರು 7 ವರ್ಷಗಳ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಮನೆಯಲ್ಲಿದ್ದರು. ದೈಹಿಕ ಸಂಪರ್ಕ ಬೆಳೆದಾಗ ಅವಬ್ಬರಿಗೂ 20 ವರ್ಷ. ಸಂತ್ರಸ್ತೆ ಏಳೂವರೆ ತಿಂಗಳು ಗರ್ಭಿಣಿಯಾಗಿದ್ದರು. ಮದುವೆಯಾಗಲು ಹುಡುಗನಿಗೆ 21 ವರ್ಷ ಆಗಬೇಕು. ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪದ ಮೇಲೆ ಅರ್ಜಿದಾರನ ವಿರುದ್ಧ ಕ್ರಿಮಿನಲ್ ದಾಖಲಾಗಿದೆ ಎಂದು ತಿಳಿಸಿದರು.
ಜತೆಗೆ, ಪ್ರಕರಣದಲ್ಲಿ ಅರ್ಜಿದಾರನ ಕುಟುಂಬದವರನ್ನೂ ಸಿಲುಕಿಸಲಾಗಿದೆ. ಈ ಪ್ರಕರಣ ಮುಂದಿಟ್ಟುಕೊಂಡು ರಾಜಕೀಯ ವಿರೋಧಿಗಳು ಆರೋಪಿ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್‌ನಲ್ಲೂ ಆರೋಪಿಗಳನ್ನಾಗಿಸಲಾಗಿದೆ. ಕ್ರಿಮಿನಲ್ ಪ್ರಕರಣದಿಂದಾಗಿ ಎರಡೂ ಕುಟುಂಬಗಳು ಒಟ್ಟಿಗೆ ಕುಳಿತು ಮಾತನಾಡಲಾಗದ ಸನ್ನಿವೇಶ ಸೃಷ್ಟಿಯಾಗಿದೆ. ಪ್ರಕರಣಕ್ಕೆ ತಡೆಯಾಜ್ಞೆ ನೀಡಬೇಕು. ಆಗ ಯುವತಿ ಹಾಗೂ ಯುವಕನ ಕುಟುಂಬದವರ ನಡುವೆ ಮಾತುಕತೆ ನಡೆಸಲು ಸಹಾಯವಾಗುತ್ತದೆ ಎಂದು ಕೋರಿದರು.
ಮದುವೆಯಾಗುವುದೇ ಉತ್ತಮ:
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮದುವೆಯಾಗಿಲ್ಲ ಎಂದಾದರೆ ಮದುವೆಯಾಗಿ. 21 ವರ್ಷ ಆಗಿಲ್ಲ ಎಂದಾದರೆ, 21 ವರ್ಷ ಆದ ಮೇಲೆಯೇ ಮದುವೆಯಾಗಿ. ಸದ್ಯ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಸದ್ಯ ಯುವತಿಗೆ ಮಗುವಾಗಿದೆ. ಆ ಮಗುವಿಗೆ ಅರ್ಜಿದಾರನೇ ತಂದೆಯಲ್ಲವೇ. ತಾಯಿ ಹಾಗೂ ಮಗುವನ್ನು ಅನಾಥರನ್ನಾಗಿಸುವುದು ಸರಿಯಲ್ಲ. 7 ವರ್ಷ ಪ್ರೀತಿಸಿ, ಯುವತಿಗೆ ಮಗುವನ್ನು ನೀಡಿದ ಸಂದರ್ಭದಲ್ಲಿ ಮದುವೆಯಾಗುವುದೇ ಸರಿ. ಇಲ್ಲ ಎಂದರೆ ಕಷ್ಟವಾಗುತ್ತದೆ ಎಂದು ಹೇಳಿತು.
ಮುಂದುವರಿದು, ಆರೋಪಿಯೇ ಮಗುವಿನ ತಂದೆಯಾಗಿರುವುದರಿಂದ ಅದರ ಆರೈಕೆ ಮಾಡುವುದು ಆರೋಪಿ ಕರ್ತವ್ಯ. ಮದುವೆಯಾಗಿಲ್ಲ. ಮಗು ಬೇರೆ ಆಕೆಯ ಜತೆಯಲ್ಲಿಯೇ ಇದೆ. ಇದರಿಂದ, ಯುವತಿ ಸಾಕಷ್ಟು ನೊಂದಿರಬಹುದು. ಮದುವೆಯಾಗಿ ಬನ್ನಿ. ಕ್ರಿಮಿನಲ್ ಕೇಸ್ ರದ್ದುಪಡಿಸಲಾಗುವುದು. ಮತ್ತೆ ಯುವತಿಯನ್ನು ತ್ಯಜಿಸಿದರೆ ಕ್ರಿಮಿನಲ್ ಪ್ತಕರಣ ಮರು ಸ್ಥಾಪನೆ ಆಗಲಿದೆ ಎಂದು ಆದೇಶ ಬರೆಸುತ್ತೇನೆ ಎಂದ ತೀಕ್ಷ್ಣವಾಗಿ ನುಡಿಯಿತು.
ಅಂತಿಮವಾಗಿ, ಮಗು ಹಾಗೂ ಯುವತಿಯನ್ನು ಅನಾಥವಾಗಿ ಬಿಡಲಾಗದು. ಯುವತಿ ಹಾಗೂ ಮಗುವಿನ ಜೀವನ ನಿರ್ವಹಣೆಗಾಗಿ ಮಾಸಿಕ 10 ಸಾವಿರ ರೂ. ನೀಡಿ. ಜೀವನಾಂಶ ನೀಡಲು ಸಿದ್ದರಿದ್ದಾರಾ? ಆಗ ಬೇಕಾದರೆ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗುವುದು ಎಂದ ನ್ಯಾಯಮೂರ್ತಿಗಳು, ಈ ಕುರಿತು ಅರ್ಜಿದಾರರ ಅಭಿಪ್ರಾಯ ತಿಳಿಸುವಂತೆ ಅವರ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)