ಬೆಟ್ಟಿಂಗ್ ಆರೋಪ; ಗೃಹಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ತುಮಕೂರು ನಗರದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನುಬಾಹಿರ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸಿರಿಗೆ ನಿರ್ದೇಶಿಸಿದ್ದ ಬೆಂಗಳೂರಿನ 42 ನೇ ಎಸಿಜೆಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ಡಾ. ಜಿ. ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ‌ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಪ್ರಕರಣ ದಾಖಲಿಸಲು ಆದೇಶಿಸುವುದಕ್ಕೂ ಮುನ್ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಬಿಎನ್‌ಎಸ್‌ಎಸ್‌ ಸೆಕ್ಷನ್ 175 (3) ಅಡಿ ಪೊಲೀಸರ ವಾದ ಆಲಿಸಿಲ್ಲ. ಆದ್ದರಿಂದ, ಖಾಸಗಿ ದೂರು ಆಧರಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸುವಂತೆ ಏಪ್ರಿಲ್ 21ರಂದು ಮಾಡಿರುವ ಆದೇಶ ಹಾಗೂ ಆನಂತರದ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ವಿಚಾರಣೆ ವೇಳೆ ಪರಮೇಶ್ವರ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, ಗೃಹಸಚಿವರು ಕಬಡ್ಡಿ ಟೂರ್ನಿಯ ಮುಖ್ಯ ಅತಿಥಿಯಾಗಿ ಹೋಗಿದ್ದರು. ವಿಜಯಪುರ ತಂಡ ಗೆಲ್ಲುತ್ತದೆಂದು 500 ರೂ. ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿದ್ದಾರೆ. ಸೋತ ತಂಡಕ್ಕೆ ಬೇಸರವಾಗಬಾರದೆಂದು ಡಾ.ಜಿ. ಪರಮೇಶ್ವರ್ ಹೀಗೆ ಹೇಳಿದ್ದಾರೆ. ಇದನ್ನೇ ಅಪರಾಧವೆಂಬಂತೆ ಬಿಂಬಿಸಿ ಖಾಸಗಿ ದೂರು ದಾಖಲಿಸಲಾಗಿದೆ. ವಿಚಾರಣಾ ಕೋರ್ಟ್ ಎಫ್‌ಐಆರ್‌ ದಾಖಲಿಸಲು ಆದೇಶಿಸುವ ಮುನ್ನ ಪ್ರಕ್ರಿಯೆ ಪಾಲಿಸಿಲ್ಲವೆಂದು ಆಕ್ಷೇಪಿಸಿದರು.

ದೂರುದಾರ ಎಚ್‌.ಆರ್‌. ನಾಗಭೂಷಣ್‌ ಪರ ವಕೀಲ ಎಸ್‌. ಉಮಾಪತಿ ಅವರು, ಪ್ರಕರಣವು ಪೂರ್ವ ಎಫ್‌ಐಆರ್‌ ಹಂತದಲ್ಲಿದೆ. ವಿಡಿಯೊ ಕ್ಲಿಪಿಂಗ್‌ ಮತ್ತು ಸಂಬಂಧಿತ ದಾಖಲೆಯನ್ನು ದೂರುದಾರರು ಸಂಬಂಧಿತ ಪೊಲೀಸರಿಗೆ ಸಲ್ಲಿಸಿದ್ದಾರೆ. ಗೃಹ ಸಚಿವರ ಹೇಳಿಕೆ ವೈರಲ್‌ ಆಗಿದ್ದು, ಪತ್ರಿಕೆಗಳಲ್ಲೂ ವರದಿಯಾಗಿದೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸದೇ ಹಿಂಬರಹ ನೀಡಿದ್ದಾರೆ. ಏಕೆಂದರೆ, ಅರ್ಜಿದಾರರು ಗೃಹ ಸಚಿವರು ಎಂದು. ಪರಮೇಶ್ವರ್‌ ಅವರು ಯಾವ ಗ್ಯಾಂಗ್‌ನ ಸದಸ್ಯರು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದರು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ಅಪರಾಧ ಏನು? ಬಿಎನ್‌ಎಸ್‌ ಸೆಕ್ಷನ್‌ 112 (ಕ್ಷುಲ್ಲಕ ಸಂಘಟಿತ ಅಪರಾಧ). ಪರಮೇಶ್ವರ್‌ ಯಾವ ಗ್ಯಾಂಗ್‌ನ ಸದಸ್ಯರು? ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ? ಯಾರಾದರೂ ಹಾಸ್ಯ ಮಾಡಿದರೆ ಅದು ಕ್ರಿಮಿನಲ್‌ ಅಪರಾಧವೇ? ಬಿಎನ್‌ಎಸ್‌ಎಸ್‌ ಸೆಕ್ಷನ್‌ 175(3)ಅಡಿ ಪೊಲೀಸರಿಗೆ ಎಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಪ್ರಶ್ನಿಸಿತಲ್ಲದೆ, ಅರ್ಜಿದಾರರು ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ. ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟು, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:
ಕಳೆದ ವರ್ಷ ಅಕ್ಟೋಬರ್ 19ರಂದು ತುಮಕೂರು ನಗರದಲ್ಲಿ ನಡೆದ ಕಬಡ್ಡಿ ಪಂದ್ಯದ ವೇಳೆ ಕೊರಟೆಗೆರೆ ಶಾಸಕರೂ ಆದ ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಗೆದ್ದ ತಂಡವಾದ ದಕ್ಷಿಣ ಕನ್ನಡ ತಂಡದ ವಿರುದ್ಧ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ ಹಾಗೂ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರೇರೇಪಿಸಿದ್ದಾರೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಿದ್ದ ದೂರುದಾರ ಎಚ್.ಆರ್. ನಾಗಭೂಷಣ್, ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳ ಪ್ರತಿ ಹಾಗೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ದೂರನ್ನು ‘ಆಧಾರರಹಿತ’ ಎಂಬ ಕಾರಣ ನೀಡಿ ಮುಕ್ತಾಯಗೊಳಿಸಿ 2025ರ ಅಕ್ಟೋಬರ್ 29ರಂದು ಕೊಡಿಗೇಹಳ್ಳಿ ಪೊಲೀಸರು ನೀಡಿದ್ದ ಹಿಂಬರಹದ ಪ್ರತಿಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಖಾಸಗಿ ದೂರನ್ನು‌ ಮಂಗಳವಾರ (ಏಪ್ರಿಲ್ 21) ವಿಚಾರಣೆ ನಡೆಸಿದ್ದ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಎಸಿಜೆಎಂ) ಕೆ.ಎನ್‌. ಶಿವಕುಮಾರ್ ಅವರು, ಪ್ರಕರಣದ ದಾಖಲೆಗಳನ್ನು ಗಮನಿಸಿದರೆ, ದೂರುದಾರರು ಒದಗಿಸಿರುವ ಪತ್ರಿಕಾ ವರದಿಗಳನ್ನು ಗಮನಿಸದೆ ಅಥವಾ ದೂರುದಾರರಿಂದ ಯಾವುದೇ ಸಾಕ್ಷ್ಯಗಳನ್ನು ಪಡೆಯದೆ ಪೊಲೀಸರು ದೂರನ್ನು ಮುಕ್ತಾಯಗೊಳಿಸಿದ್ದಾರೆ. ದೂರುದಾರರು ಆರೋಪಿಗಳ ವಿರುದ್ಧ ಬೆಟ್ಟಿಂಗ್‌ನಲ್ಲಿ ತೊಡಗಿದ ಆರೋಪ ಮಾಡಿದ್ದಾರೆ. ಇದು ಶಾಸಕರ ಅಥವಾ ಜಿಲ್ಲಾಧಿಕಾರಿಗಳ ಅಧಿಕೃತ ಕರ್ತವ್ಯದ ಭಾಗವಲ್ಲ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಸರ್ಕಾರದ ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರಲ್ಲದೆ, ಆರೋಪಿಗಳ ವಿರುದ್ಧ ಬಿಎನ್‌ಎಸ್‌ಎಸ್ ಸೆಕ್ಷನ್ 175(3) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದರು.

Related Articles

Comments (0)

Leave a Comment