ವಂದೇ ಮಾತರಂ ಗೀತೆಯ ಎಲ್ಲ ಚರಣಗಳ ಗಾಯನ ಕಡ್ಡಾಯ; ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
- by LegalSamachar
- April 9, 2026
- 8 Views
ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ ‘ವಂದೇ ಮಾತರಂ’ ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ಹಾಜರಾಗಿ, ಕೇಂದ್ರ ಗೃಹ ಇಲಾಖೆಯ ಆದೇಶದಲ್ಲಿ ವಂದೇ ಮಾತರಂ ಗೀತೆ ಹಾಡಬಹುದು ಎಂಬ ಪದ ಬಳಕೆ ಮಾಡಲಾಗಿದ್ದು, ಅದು ಕಡ್ಡಾಯವಲ್ಲ ಎಂಬುದನ್ನು ಸೂಚಿಸುತ್ತದೆ. ಜತೆಗೆ, ಇಂಥದೇ ಮನವಿ ಒಳಗೊಂಡಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ವಜಾಗೊಳಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನು ಆಲಿಸಿದ ನ್ಯಾಯಪೀಠ, ಕೇಂದ್ರದ ಕ್ರಮವು ಸಂವಿಧಾನದ ಜಾತ್ಯತೀತ ಮೂಲಭೂತ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ವಂದೇ ಮಾತರಂ (ರಾಷ್ಟ್ರಗೀತೆ) ಗೀತೆಯನ್ನು ಯಾವುದೇ ಶಾಸನಬದ್ಧ ಚೌಕಟ್ಟಿನ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿಲ್ಲ. ಗೃಹ ಸಚಿವಾಲಯದ ಆದೇಶದಲ್ಲಿ ‘ಮಾಡಬಹುದು’ ಎಂಬ ಸಾಧ್ಯತೆಯನ್ನು ಉಲ್ಲೇಖಿಸಲಾಗಿದೆಯೇ ಹೊರತು ಅದು ಕಡ್ಡಾಯವಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಇಂಥದೇ ಮನವಿಯುಳ್ಳ ಅರ್ಜಿಯೊಂದನ್ನು ಅಪಕ್ವವೆಂದು (ಪ್ರಿಮೆಚ್ಯೂರ್) ಪರಿಗಣಿಸಿ ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಪಿಐಎಲ್ ವಜಾಗೊಳಿಸಿ ಆದೇಶಿಸಿತು.
ಅರ್ಜಿದಾರರ ಆಕ್ಷೇಪವೇನು?
ವಂದೇ ಮಾತರಂ ಗೀತೆಯನ್ನು ಶಾಲೆಗಳ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಹಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಜಾಲಾತಾಣದಲ್ಲಿ ಭಾರತದ ರಾಷ್ಟ್ರ ಗೀತೆಗೆ ಸಂಬಂಧಿಸಿದ ಆದೇಶಗಳು ಎಂಬ ಆದೇಶ ಪ್ರಕಟಿಸಲಾಗಿದೆ. ಈ ಆದೇಶದಂತೆ ವಂದೇ ಮಾತರಂ ಗೀತೆಯಲ್ಲಿರುವ ಆರು ಚರಣಗಳುಳ್ಳ ಅಧಿಕೃತ ಆವೃತ್ತಿಯನ್ನು ಎಲ್ಲ ಶಾಲೆಗಳು ಪ್ರಾರಂಭಕ್ಕೂ ಮುನ್ನ ಪ್ರತಿ ದಿನ ಸಾಮೂಹಿಕವಾಗಿ ಹಾಡಬೇಕು ಎಂದು ಸೂಚಿಸಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
ಸಂವಿಧಾನದ ರಚನಾ ಸಭೆಯಲ್ಲಿ ವಂದೇ ಮಾತರಂ ಗೀತೆಯಲ್ಲಿನ ಒಟ್ಟು ಆರು ಚರಣಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಲ್ಲ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ತಿಳಿಸಲಾಗಿದೆ. ಆದರೆ, ವಂದೇ ಮಾತರಂ ಗೀತೆಯ 3 ರಿಂದ 6ರ ವರೆಗಿನ ಚರಣಗಳಲ್ಲಿ ಹಿಂದು ದೇವತೆಗಳಾದ ದುರ್ಗಾ, ಕಮಲಾ (ಲಕ್ಷ್ಮೀ) ಮತ್ತು ವಾಣಿ (ಸರಸ್ವತಿ)ಯನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಗೀತೆಯ ಶ್ಲೋಕಗಳನ್ನು ಪ್ರತಿದಿನ ಹಾಡುವುದಕ್ಕೆ ನಿರ್ದೇಶನ ನೀಡಲಾಗಿದೆ. ಈ ಅಂಶವು ಸಂವಿಧಾನದ ವಿಧಿ 25 (ಆತ್ಮಸಾಕ್ಷಿಯ ಹಕ್ಕು), 28 (ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧ) ಮತ್ತು 14ಕ್ಕೆ (ಸಮಾನತೆ) ತದ್ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
ಮನವಿಗಳೇನು?
ವಂದೇ ಮಾತರಂ ಗೀತೆಯ 3ರಿಂದ 6ನೇ ಚರಣಗಳನ್ನು ಅಧಿಕೃತ ಆವೃತ್ತಿಯ ಭಾಗವನ್ನಾಗಿ ಸೂಚಿಸಿ, ಕಡ್ಡಾಯವಾಗಿ ಹಾಡುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಶಾಲೆಗಳಲ್ಲಿ ದಿನ ನಿತ್ಯ ವಂದೇ ಮಾತರಂ ಹಾಡುವುದನ್ನು ಕಡ್ಡಾಗೊಳಿಸಿ ಹೊರಡಿಸಲಾಗಿರುವ ಶಿಷ್ಟಾಚಾರ ಮಾರ್ಗಸೂಚಿಗಳ ಆದೇಶವನ್ನು ಪರಿಷ್ಕರಣೆ ಮಾಡುವಂತೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ವಂದೇ ಮಾತರಂ ಗೀತೆಯಲ್ಲಿ ಯಾವುದೇ ಧಾರ್ಮಿಕ ಅಂಶಗಳನ್ನು ಒಳಗೊಳ್ಳದ ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಲು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೇಂದ್ರೀಯ ವಿದ್ಯಾಲಯಗಳ ಸಂಘಟನೆ ಶಾಲೆಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಬೇಕೆಂದು ಪಿಐಎಲ್ನಲ್ಲಿ ಮನವಿ ಮಾಡಲಾಗಿತ್ತು.
ಗೃಹ ಸಚಿವಾಲಯದ ಆದೇಶ ಅಲ್ಪ ಸಂಖ್ಯಾತರ ನಂಬಿಕೆ ಮತ್ತು ದೇವರ ಬಗ್ಗೆ ನಂಬಿಕೆಯಿಲ್ಲದ ಕುಟುಂಬಗಳ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
Related Articles
Thank you for your comment. It is awaiting moderation.



Comments (0)