ಪೊಲೀಸ್ ಕಸ್ಟಡಿಯಲ್ಲಿ ಯುವಕನ ಸಾವು; ಕೈಗೊಂಡ ಕ್ರಮಗಳ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- April 8, 2026
- 6 Views
ಬೆಂಗಳೂರು: ಕಳೆದ ನವೆಂಬರ್‌ನಲ್ಲಿ ಸಣ್ಣೇನಹಳ್ಳಿಯ ದರ್ಶನ್ ಎಂಬ ಯುವಕನನ್ನು ಠಾಣೆಗೆ ಕರೆದೊಯ್ದು ಗಂಭೀರವಾಗಿ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣವಾದ ಆರೋಪದಲ್ಲಿ ವಿವೇಕನಗರ ಠಾಣೆ ಪೊಲೀಸರು ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪೊಲೀಸ್ ಕಸ್ಟಡಿ ಸಾವುಗಳಿಗೆ ಸಂಬಂಧಿಸಿದಂತೆ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.
ಇದೇ ವೇಳೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿರುವ ಸಾವುಗಳ ತನಿಖೆ, ಪ್ರಾಸಿಕ್ಯೂಷನ್, ಸಂತ್ರಸ್ತರಿಗೆ ಪರಿಹಾರ ಮತ್ತು ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡುವ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಅರ್ಜಿಯಲ್ಲಿ ಮಾಡಲಾಗಿದ್ದ ಮನವಿ ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು.
ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಕಸ್ಟಡಿ ಸಾವುಗಳ ಕುರಿತು ಹಲವು ತೀರ್ಪುಗಳು ಬಂದಿವೆ. ನಿಮಗೆ ಯಾವ ಆದೇಶ ಬೇಕು ಎಂದು ಕೇಳಿತು. ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೋಜಾರಿಯೊ ಪ್ರತಿಕ್ರಿಯಿಸಿ, ಕಸ್ಟಡಿ ಸಾವಿನ ಬಗ್ಗೆ ಪರಿಹಾರ ಕೋರುತ್ತಿಲ್ಲ, ಕಸ್ಟಡಿಯಲ್ಲಿನ ಕಿರುಕುಳದ ಬಗ್ಗೆ ಕೇಳುತ್ತಿದ್ದೇವೆ ಎಂದರು.
ಆಗ ನ್ಯಾಯಪೀಠ, ಕಸ್ಟಡಿಯಲ್ಲಿನ ಕಿರುಕುಳದ ಬಗ್ಗೆಯೂ ಹಲವು ತೀರ್ಪುಗಳು ಬಂದಿವೆ. ವ್ಯಕ್ತಿಯನ್ನು ಬಂಧಿಸಿದ ನಂತರ ಪಾಲಿಸಬೇಕಾದ ಪ್ರಕ್ರಿಯೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಪ್ರಕ್ರಿಯೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ನಿರ್ದೇಶನ ನೀಡಬಹುದು. ಕಿರುಕುಳ ನೀಡಿರುವುದು ಸಾಬೀತಾದ ಪ್ರಕರಣಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹಲವು ಆದೇಶಗಳಲ್ಲಿ ಸಂತ್ರಸ್ತರಿಗೆ ಪರಿಹಾರಕ್ಕೆ ಆದೇಶಿಸಿದೆ ಎಂದು ಹೇಳಿತು.
ಅಂತಿಮವಾಗಿ ಅರ್ಜಿಯಲ್ಲಿನ ಐದು ಮನವಿಗಳ ಪೈಕಿ ಐದನೇ ಮನವಿಯಂತೆ 2025ರ ನವೆಂಬರ್‌ನಲ್ಲಿ ಸಣ್ಣೇನಹಳ್ಳಿಯ ದರ್ಶನ್ ಎಂಬ ಯುವಕನನ್ನು ಕರೆದೊಯ್ದು ಗಂಭೀರವಾಗಿ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣವಾದ ಆರೋಪ ಸಂಬಂಧ ವಿವೇಕನಗರ ಠಾಣೆ ಪೊಲೀಸರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಇತರ ಮನವಿಗಳು:
ಪೊಲೀಸ್ ಕಸ್ಟಡಿಯಲ್ಲಿನ ಕಿರುಕುಳ ಮತ್ತು ಸಾವನ್ನು ತಡೆಯಲು ಕಡ್ಡಾಯ ವೈದ್ಯಕೀಯ ಪರೀಕ್ಷೆ, ಎಫ್‌ಐಆರ್ ದಾಖಲು, ಮಾಜಿಸ್ಟೀರಿಯಲ್ ತನಿಖೆ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಒಳಗೊಂಡು ಸಮಗ್ರ ಶಿಷ್ಟಾಚಾರ ರೂಪಿಸಲು ನಿರ್ದೇಶಿಸಬೇಕು. ಕಸ್ಟಡಿಯಲ್ಲಿನ ದೌರ್ಜನ್ಯ ಮತ್ತು ಸಾವುಗಳ ಸಂಬಂಧ ಕಠಿಣ ಮತ್ತು ಪಾರದರ್ಶಕ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳು ಚಾಲ್ತಿಯಲ್ಲಿರಬೇಕು. ಸಿಸಿಟಿವಿ ಸರಿಯಾಗಿ ಕೆಲಸ ಮಾಡದ ಠಾಣೆಯಲ್ಲಿನ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಮನವಿಗಳನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ಇನ್ನು ದರ್ಶನ್ ಸಾವಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು. ಕಾಲಮಿತಿಯಲ್ಲಿ ಹೈಕೋರ್ಟ್ ನಿಗಾದಲ್ಲಿ ತನಿಖೆ ಕೈಗೊಳ್ಳಬೇಕು. ದರ್ಶನ್ ಕುಟುಂಬದವರಿಗೆ 50 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಬೇಕು. ಮೃತನ ಕುಟುಂಬದವರಿಗೆ ರಕ್ಷಣೆ ಒದಗಿಸಬೇಕು ಎಂಬ ಮನವಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
Related Articles
Thank you for your comment. It is awaiting moderation.



Comments (0)