ಬಿಟ್ ಕಾಯಿನ್ ಹಗರಣ: ವಂಚನೆ, ನಂಬಿಕೆ ದ್ರೋಹ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಕಿ, ರಾಬಿನ್
- by LegalSamachar
- April 3, 2026
- 7 Views
ಬೆಂಗಳೂರು: ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತವರ ಸ್ನೇಹಿತ ರಾಬಿನ್ ಖಂಡೇಲವಾಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಹಾಗೂ ಪಶ್ಚಿಮ ಬಂಗಾಳದ ಮೂಲದ ಬಿಟ್ ಕಾಯಿನ್ ಟ್ರೇಡರ್ ರಾಬಿನ್ ಖಂಡೇಲವಾಲ್ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ದಾಖಲೆಗಳನ್ನು ಪರಿಶೀಲಿಸಿ ವಾದ ಮಂಡಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.
ಪ್ರಕರಣವೇನು?
ಬೆಂಗಳೂರಿನ ಇಂದಿರಾನಗರದ ಯಶೋಧಾ ದೇವಿ ಎಂಬುವರು ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿ, ಶ್ರೀಕೃಷ್ಣ ಹಾಗೂ ರಾಬಿನ್ ಖಂಡೇಲವಾಲ್ ಅವರು 2019ರಲ್ಲಿ ಭೇಟಿಯಾಗಿ 28 ಲಕ್ಷ ನೀಡಿದರೆ ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿ 28 ಲಕ್ಷ ರೂ. ಜತೆ 17 ಲಕ್ಷ ರೂ. ಸೇರಿಸಿ ಒಟ್ಟು 45 ಲಕ್ಷ ರೂ. ನೀಡುತ್ತೇವೆ ಎಂದು ಖಾತೆ ನಂಬರ್ ಒಂದನ್ನು ನೀಡಿದ್ದರು. ಅದಕ್ಕೆ ತಾಂತ್ರಿಕ ತೊಂದರೆಯಿಂದಾಗಿ ಹಣ ಹೋಗಿರಲಿಲ್ಲ. ಆನಂತರ, ಅಜಿತ್ ಖಂಡೇಲವಾಲ್ ಎಂಬಾತನ ಖಾತೆಗೆ ಹಣ ಹಾಕುವಂತೆ ಆರೋಪಿಗಳು ಸೂಚಿಸಿದ್ದರು. ಅದರಂತೆಯೇ ಅಜಿತ್ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಒಂದು ತಿಂಗಳ ನಂತರ ಹಣ ಕೇಳಿದಾಗ ಸ್ವಲ್ಪ ದಿನಗಳಲ್ಲೇ ಹಿಂದಿರುಗಿಸುವುದಾಗಿ ಹೇಳಿದ್ದ ಆರೋಪಿಗಳು ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದ್ದರಿಂದ, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.
ದೂರು ಆಧರಿಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರುಬಿಟ್ ಆನ್ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ರಾಬಿನ್ ಖಂಡೇವಾಲ್ ಮತ್ತು ಅಜಿತ್ ಖಂಡೇಲವಾಲ್ ವಿರುದ್ಧ ಪೊಲೀಸರು 2020ರ ನವೆಂಬರ್ 19ರಂದು ಐಪಿಸಿ ಸೆಕ್ಷನ್ 406 ಹಾಗೂ 420ರ ಅಡಿ ಪ್ರಕರಣ ದಾಖಲಿಸಿದ್ದರು. ಈ ಎಫ್ಐಆರ್ ಮತ್ತದರ ಸಂಬಂಧ 2021ರ ಫೆಬ್ರವರಿ 10ರಂದು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.
Related Articles
Thank you for your comment. It is awaiting moderation.



Comments (0)