ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ; ಬುಧವಾರದೊಳಗೆ ರದ್ದುಪಡಿಸುವಂತೆ ಹೈಕೋರ್ಟ್ ತಾಕೀತು
- by Prashanth Basavapatna
- March 23, 2026
- 6 Views
ಬೆಂಗಳೂರು: ಜೀವಂತವಾಗಿರುವ ವ್ಯಕ್ತಿಯ ಹೆಸರಿನಲ್ಲಿ ನೀಡಲಾಗಿದ್ದ ತಾತ್ಕಾಲಿಕ ಮರಣಪತ್ರ ರದ್ದುಪಡಿಸದ ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಬುಧವಾರದೊಳಗೆ (ಮಾರ್ಚ್ 25) ಮರಣ ಪ್ರಮಾಣಪತ್ರ ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.
ಕಳೆದ ವರ್ಷ ಏಪ್ರಿಲ್ 23ರಂದು ನೀಡಿರುವ ತಾತ್ಕಾಲಿಕ ಮರಣ ಪ್ರಮಾಣಪತ್ರ ರದ್ದುಪಡಿಸಲು ಬೆಂಗಳೂರಿನ ಚಿಕ್ಕಪೇಟೆಯ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಡಿ. ಮೆಹಬೂಬ್ ಬಾಷಾ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲೆ ಒ. ಅಶ್ವಿನಿ ವಾದ ಮಂಡಿಸಿ, ಅರ್ಜಿದಾರರು ಜೀವಂತವಿದ್ದರೂ ಮರಣ ಪ್ರಮಾಣಪತ್ರ ನೀಡಲಾಗಿದೆ. ಅರ್ಜಿದಾರರು ಬದುಕಿದ್ದಾರೆ ಅವರ ಪಾನ್, ಆಧಾರ್ ಎಲ್ಲವೂ ಇದೆ ಎಂದು ಬಿಬಿಎಂಪಿಯು ಆಸ್ಪತ್ರೆಗೆ ತಿಳಿಸಿದೆ. ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಸಂಪರ್ಕಿಸಲಾಗಿದೆ. ಈಗ ಅರ್ಜಿದಾರರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆಗ ನ್ಯಾಯಪೀಠ, ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಅವರು ಬುಧವಾರದೊಳಗೆ ಮರಣ ಪ್ರಮಾಣಪತ್ರ ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತಲ್ಲದೆ, ಮರಣ ಪ್ರಮಾಣಪತ್ರ ನೀಡಿರುವುದನ್ನು ರದ್ದುಪಡಿಸುವಂತೆ ಕಳೆದ ವರ್ಷ ಆದೇಶಿಸಲಾಗಿದೆ. ಇದನ್ನು ಪಾಲಿಸದೇ ಇರುವುದರಿಂದ ದಂಡ ಏಕೆ ವಿಧಿಸಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿತು.
ಸರ್ಕಾರದ ಪರ ವಕೀಲ ಆದಿತ್ಯ ಪ್ರತಿಕ್ರಿಯಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಅಂತಿಮವಾಗಿ ನ್ಯಾಯಪೀಠ, ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ 2025ರ ಏಪ್ರಿಲ್ 23ರಂದು ನೀಡಲಾಗಿರುವ ಮರಣ ಪ್ರಮಾಣಪತ್ರವನ್ನು ಹಿಂಪಡೆಯದೇ ಇರುವುದರಿಂದ ಅವರು ಅನಿವಾರ್ಯವಾಗಿ ನ್ಯಾಯಾಲಯದ ಕದತಟ್ಟುವಂತಾಗಿದೆ. ಬುಧವಾರದೊಳಗೆ ಮರಣ ಪ್ರಮಾಣಪತ್ರವನ್ನು ಹಿಂಪಡೆದು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಆದೇಶಿಸಿತು.
ಜತೆಗೆ, ಅರ್ಜಿ ಸಂಬಂಧ ಪ್ರತಿವಾದಿಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿ, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ, ಚಿಕ್ಕಪೇಟೆಯ ವೈದ್ಯಾಧಿಕಾರಿ, ಬಿಬಿಎಂಪಿಯ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)