ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಹೋಟೆಲ್‌ಗಳ ಸಂಘದ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು: ವಾಣಿಜ್ಯ ಬಳಕೆ ಅಡುಗೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಸರಿಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿರುವ ಹೈಕೋರ್ಟ್, ಬೇರೆ ದೇಶಗಳಿಗೆ ಹೋಲಿಸಿದರೆ ಸರ್ಕಾರ ಶಕ್ತಿಮೀರಿ ಕೆಲಸ ಮಾಡುತ್ತಿದೆ. ಇದನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗದು. ಯುದ್ಧದ ಸಂದರ್ಭದಲ್ಲಿ ನ್ಯಾಯಾಲಯಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.

ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹಾಲಿ ವಿಚಾರವನ್ನು ಸರ್ಕಾರಕ್ಕೆ ಬಿಡುವುದು ಒಳಿತು ಎಂಬ ಕೇಂದ್ರ ಸರ್ಕಾರದ ಪರ ವಕೀಲರ ವಾದವನ್ನು ಪುರಸ್ಕರಿಸಿ, ಅರ್ಜಿ ವಿಲೇವಾರಿ ಮಾಡಿತು.

ಕೇಂದ್ರದ ವಾದವೇನು?
ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ವಾದ‌ ಮಂಡಿಸಿ, ಪರಿಸ್ಥಿತಿ ಬದಲಾಗುತ್ತಿದ್ದು, ಭಾರತದಲ್ಲಿ ಎಲ್‌ಪಿಜಿ ಪೂರೈಕೆ ವ್ಯತ್ಯಯ ಕಡಿಮೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ನಿಯಂತ್ರಣದಲ್ಲಿ ಇರದ ಕೆಲ ಬೆಳವಣಿಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗದ್ದು, ಎಲ್‌ಪಿಜಿ ಪೂರೈಕೆಯಲ್ಲಿ ಕೊರತೆಯಾಗುವುದನ್ನು ತಪ್ಪಿಸಲು ಭಾರತ ಸರ್ಕಾರ ಕೆಲಸ ಮಾಡುತ್ತಿದೆ. ಈ ವಿಚಾರವನ್ನು ಕಾರ್ಯಾಂಗಕ್ಕೆ ಬಿಡಬೇಕು ಎಂದರು.

ಮುಂದುವರಿದು, ಪ್ರತಿದಿನ ಪರಿಸ್ಥಿತಿ ಬದಲಾಗುತ್ತಿದ್ದು, ಆದ್ಯತೆ ಬದಲಾಗಬೇಕಿದೆ. ಹೋಟೆಲ್‌ಗಳಿಗೆ ಎಲ್‌ಪಿಜಿ ಪೂರೈಸಬೇಕೋ ಅಥವಾ ಮನೆಗಳಿಗೆ ಸರಬರಾಜು ಮಾಡಬೇಕೋ ಎಂಬುದು ನಮಗೆ ತಿಳಿಯದಾಗಿದೆ. ಹಲವು ವಿಚಾರಗಳು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ರಾಜ್ಯದಾದ್ಯಂತ ಎಲ್‌ಪಿಜಿ ಸಿಲಿಂಡರ್‌ ಹಂಚಿಕೆಯ ಕುರಿತು ಕಳವಳ ವ್ಯಕ್ತವಾಗಿರುವುದರ ಕುರಿತು ನ್ಯಾಯಪೀಠ ಪ್ರಸ್ತಾಪಿಸಿದಾಗ ಉತ್ತರಿಸಿದ ಮೆಹ್ತಾ, ಇಂಥ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜತೆ ಸಮಾಲೋಚನೆ ನಡೆಸುತ್ತದೆ. ಎರಡೂ ಕಡೆಯ ಸರ್ಕಾರಗಳು ಒಂದೇ ನಿಲುವು ತಳೆಯಬೇಕಾಗುತ್ತದೆ. ಹಂಚಿಕೆದಾರರಿಂದ ಎಲ್‌ಪಿಜಿ ಪೂರೈಕೆಯಲ್ಲಿ ವಂಚನೆ ಕಂಡುಬಂದರೆ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲರು, ಎಲ್‌ಪಿಜಿ ವ್ಯತ್ಯಯ ಕುರಿತು ಇಂದು ಸಭೆ ನಡೆಯಲಿದ್ದು, ಅಲ್ಲಿನ ಬೆಳವಣಿಗೆಯ ಬಗ್ಗೆ ತಿಳಿಯಲು ಅರ್ಜಿಯನ್ನು ಬಾಕಿ ಉಳಿಸಬೇಕು. ಎಲ್‌ಪಿಜಿ ಪೂರೈಕೆಯಲ್ಲಿ ಕೇರಳ ಮತ್ತು ತಮಿಳುನಾಡಿನ ಪರಿಸ್ಥಿತಿ ಚೆನ್ನಾಗಿದೆ. ಕೆಲ ಮಾರ್ಗಸೂಚಿಗಳನ್ನು ಅನುಸರಿಸಿದರೆ ಕರ್ನಾಟಕದಲ್ಲೂ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದರು.

ಇದಕ್ಕೆ ಪ್ರತಕ್ರಿಯಿಸಿದ ಮೆಹ್ತಾ, ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಿಲುವು ತಳೆಯಬೇಕು. ಕೇರಳ ಮತ್ತು ತಮಿಳುನಾಡಿನ ವಿಚಾರ ಪ್ರಸ್ತಾಪಿಸಿ, ರಾಜಕೀಯ ಪಕ್ಷಪಾತ ಎಂದು ಅರ್ಜಿದಾರರ ಪರ ವಕೀಲರು ಹೇಳಲಾಗದು. ಇದಕ್ಕೆ ಸೂಕ್ತ ಮತ್ತು ಸರಿಯಾದ ಕಾರಣಗಳನ್ನು ನೀಡಬೇಕು ಎಂದರಲ್ಲದೆ, ಎಲ್‌ಪಿಜಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಸಹ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ ಎಂದು ಕೋರ್ಟ್ ಗಮನಕ್ಕೆ ತಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ವಿಚಾರವು ಸರ್ಕಾರದ ನೀತಿಯ ಭಾಗವಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ನೇತೃತ್ವದಲ್ಲಿ ಇಂದು ನಡೆಯುವ ಸಭೆಯಲ್ಲಿ ಪರಿಸ್ಥಿತಿಯ ಕುರಿತು ಅರ್ಜಿದಾರರು ಮನವರಿಕೆ ಮಾಡಿಕೊಡಬಹುದು ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿತು.

Related Articles

Comments (0)

Leave a Comment