ಕಾಣೆಯಾದವರ ಪ್ರಕರಣಗಳ ನಿರ್ವಹಣೆಗೆ ಕಾರ್ಯವಿಧಾನ; ಅನುಸರಣಾ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Ramya B T
- March 20, 2026
- 5 Views
ಬೆಂಗಳೂರು: ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ನಿರ್ವಹಿಸುವ ಕಾರ್ಯವಿಧಾನವನ್ನು ಜಾರಿಗೊಳಿಸುವ ಸಂಬಂಧ ಹೊರಡಿಸಲಾಗಿರುವ ಸುತ್ತೋಲೆಯ ಅನುಸರಣಾ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಅಣ್ಣಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ 2019ರಲ್ಲಿ ನಾಪತ್ತೆಯಾದ ಕುಮಾರ್ ಎಂಬಾತನನ್ನು ಈವರೆಗೂ ಪತ್ತೆ ಮಾಡದ ಹಾಗೂ ಕುಟುಂಬದವರಿಗೆ ಮಾಹಿತಿ ನೀಡದೆಯೇ ಪ್ರಕರಣ ಮುಕ್ತಾಯಗೊಳಿಸಿರುವ ಪೊಲೀಸರ ಕ್ರಮ ಪ್ರಶ್ನಿಸಿ ಕುಮಾರ್ ಸೋದರ ಸಂಬಂಧಿ ಮಹೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಜತೆಗೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಘಟಕಗಳನ್ನು ರಚಿಸಲಾಗಿದೆ ಎಂಬುದನ್ನು ವರದಿಯಲ್ಲಿ ಸ್ಪಷ್ಟಪಡಿಸಬೇಕು. ಅಂಥ ಪ್ರಕರಣಗಳ ಮೇಲ್ವಿಚಾರಣೆ ನಡೆಸಲು ರಚಿಸಲಾದ ಪರಿಶೀಲನಾ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಂಯೋಜನೆಯ ಬಗ್ಗೆ ಮತ್ತು ಆ ಸಮಿತಿಗಳು ನಡೆಸುವ ಪರಿಶೀಲನಾ ಸಭೆಗಳ ಬಗ್ಗೆಯೂ ವಿವರಗಳನ್ನು ವರದಿಯಲ್ಲಿ ಒದಗಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.
ಸರ್ಕಾರ ಸಲ್ಲಿಸಲಿರುವ ವರದಿಯು ಸದ್ಯ ತನಿಖೆಯಲ್ಲಿರುವ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಬೇಕು. ಅವುಗಳಲ್ಲಿ ಎಷ್ಟು ಸಕ್ರಿಯ, ನಿಷ್ಕ್ರಿಯ ಪ್ರಕರಣಗಳಿವೆ ಅಥವಾ ಪತ್ತೆ ಹಚ್ಚಲಾಗಿದೆ ಎಂದು ವರ್ಗೀಕರಿಸಿರಬೇಕು. ಕಾಣೆಯಾದ ವ್ಯಕ್ತಿಯು ರಾಜ್ಯದ ಹೊರಗೆ ಸ್ಥಳಾಂತರಗೊಂಡಿದ್ದಾನೆ ಎಂದು ಶಂಕಿಸಲಾದ ಸಂದರ್ಭಗಳಲ್ಲಿ ಇತರ ರಾಜ್ಯಗಳ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯಕ್ಕಾಗಿ ಅಳವಡಿಸಿಕೊಂಡ ಕಾರ್ಯವಿಧಾನವನ್ನೂ ವಿವರಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಕಾಣೆಯಾದವರಲ್ಲಿ ಮಹಿಳೆಯರು-ಮಕ್ಕಳೇ ಹೆಚ್ಚು:
ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಪೊಲೀಸರು 2020ರಿಂದ 2025ರ ನವೆಂಬರ್ 30ರವರೆಗೆ ನಾಪತ್ತೆಯಾದ ವ್ಯಕ್ತಿಗಳ ಬಗ್ಗೆ ವರದಿ ಸಲ್ಲಿಸಿದ್ದು, ಅದರಲ್ಲಿ 38,073 ಪುರುಷರು ಕಾಣೆಯಾದ ದೂರುಗಳನ್ನು ದಾಖಲಿಸಲಾಗಿದೆ. ಈ ಪೈಕಿ 31,603 ಮಂದಿ ಪತ್ತೆಹಚ್ಚಲಾಗಿದ್ದು, 6,470 ಜನರನ್ನು ಪತ್ತೆಹಚ್ಚಲಾಗಿಲ್ಲ ಎಂದು ತಿಳಿಸಲಾಗಿತ್ತು.
ಅಲ್ಲದೆ, ನಾಪತ್ತೆಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಒಟ್ಟು 71,699 ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ 68,718 ಜನರನ್ನು ಪತ್ತೆಹಚ್ಚಲಾಗಿದ್ದು, 2,981 ಮಂದಿಯನ್ನು ಪತ್ತೆಹಚ್ಚಲಾಗಿಲ್ಲ ಎಂದು ಹೇಳಲಾಗಿದೆ. ಸರ್ಕಾರ 2026ರ ಜನವರಿ 21ರಂದು ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಹೊರಡಿಸಿದ (ಸುತ್ತೋಲೆ ಸಂಖ್ಯೆ 1054) ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ವರದಿ ಪರಿಶೀಲಿಸಿದ ನ್ಯಾಯಪೀಠ, ರಾಜ್ಯಾದ್ಯಂತ ವರದಿಯಾಗಿರುವ ಅಪ್ರಾಪ್ತ ಮಕ್ಕಳು ಮತ್ತು ಯುವತಿಯರೂ ಸೇರಿ ಕಾಣೆಯಾದ ವ್ಯಕ್ತಿಗಳಿಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ದೂರುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಕುಟುಂಬಗಳು ತಮ್ಮ ಪ್ರೀತಿಪಾತ್ರರು ಎಲ್ಲಿದ್ದಾರೆಂಬ ಮಾಹಿತಿ ಇಲ್ಲದೆ ದೀರ್ಘ ಕಾಲದವರೆಗೆ ಉಳಿಯುತ್ತವೆ. ಇಂಥ ಸಂದರ್ಭದಲ್ಲಿ ಸುತ್ತೋಲೆಯಲ್ಲಿ ಸೂಚಿಸಲಾದ ಸಾಂಸ್ಥಿಕ ಕಾರ್ಯವಿಧಾನಗಳು ಕೇವಲ ಕಾಗದದ ಮೇಲೆ ಉಳಿಯದೇ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಹೇಳಿತು.
ಅರ್ಜಿದಾರರ ಸೋದರ ಸಂಬಂಧಿಯ ಬಗ್ಗೆ ಮುಕ್ತಾಯಗೊಳಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಅನ್ನು ಸಕ್ರಿಯ ಪ್ರಕರಣ ಎಂದು ಪರಿಗಣಿಸಲಾಗಿದ್ದು, ತನಿಖೆ ಮುಂದುವರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿತು.
ಪ್ರಕರಣವೇನು?
ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ ಕುಮಾರ್ ಎಂಬಾತ ಕೇಟರಿಂಗ್ ಸಂಸ್ಥೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. 2019ರಲ್ಲಿ ನಾಪತ್ತೆಯಾದ ಆತ ಹಲವು ದಿನಗಳಾದರೂ ಮನೆಗೆ ಹಿಂದಿರುಗಿಲಿಲ್ಲ. ಇದರಿಂದ, ಆತನ ಸೋದರ ಸಂಬಂಧಿ ಮಹೇಶ್ 2020ರಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚದ ಪೊಲೀಸರು, ಪ್ರಕರಣವನ್ನು ನಿಷ್ಕ್ರಿಯ ಪ್ರಕರಣಗಳ ಪಟ್ಟಿಗೆ ಸೇರಿಸಿದ್ದರು. ಇದನ್ನು ಪ್ರಶ್ನಿಸಿ ಮಹೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)