ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಮಹತ್ವದ ಕೆಲಸಗಳಿವೆ – ಹೈಕೋರ್ಟ್‌

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಬೇರೆ ಮಹತ್ವದ ಕೆಲಸಗಳಿವೆ. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗಾಗಿ ಬರುವ ಮನವಿಗಳನ್ನು ಮುಖ್ಯಮಂತ್ರಿಗಳ ಕಚೇರಿ ಸ್ವೀಕರಿಸಬಾರದು ಎಂದಿರುವ ಹೈಕೋರ್ಟ್, ಮುಖ್ಯಮಂತ್ರಿಗಳು ತಮ್ಮ ಕಚೇರಿಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಸೂಚಿಸಿದೆ.

ಇಬ್ಬರು ಅಧಿಕಾರಿಗಳ ಪರಸ್ಪರ ವರ್ಗಾವಣೆಗೆ ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಶೀಫಾರಸು ನಿರ್ಲಕ್ಷಿಸಿ ತನ್ನನ್ನು ವರ್ಗಾವಣೆ ಮಾಡಿದ ಕ್ರಮ ಪ್ರಶ್ನಿಸಿ ಅಂಗವಿಕಲರೂ ಆಗಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೈಟ್‌ಫೀಲ್ಡ್ ವಿಭಾಗದ ಸಹಾಯಕ ಇಂಜಿನಿಯರ್ ಎಸ್. ಚೇತನ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.

ಹೈಕೋರ್ಟ್ ಹೇಳಿದ್ದೇನು?
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಅಥವಾ ಸ್ಥಳ ನಿಯುಕ್ತಿ ಮನವಿಗಳನ್ನು ಮುಖ್ಯಮಂತ್ರಿಗಳ ಕಚೇರಿಯು ನೇರವಾಗಿ ಪರಿಗಣಿಸಬಾರದು. ಇಲಾಖಾ ಹಂತದಲ್ಲೇ ಈ ವಿಚಾರಗಳು ಮುಗಿಯಬೇಕು. ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಉದ್ಯಮದಲ್ಲಿ ಕೆಲಸ ಮಾಡುವ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗಿಂತ ಉತ್ತಮವಾದ ಮತ್ತು ಮಹತ್ವದ ಕೆಲಸ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ತಮ್ಮ ಕಚೇರಿಗೆ ಅಗತ್ಯ ನಿರ್ದೇಶನ ನೀಡುವುದಕ್ಕಾಗಿ ನ್ಯಾಯಾಲಯದ ಈ ಆದೇಶವನ್ನು ಮುಖ್ಯಮಂತ್ರಿಗಳ ಮುಂದೆ ಇಡಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಶಿಫಾರಸಷ್ಟೇ, ವರ್ಗಾವಣೆ ಆದೇಶವಲ್ಲ:
ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ 2026ರ ಫೆಬ್ರವರಿ 24ರಂದು ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಮಾರ್ಚ್ 3ರಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಅದರಲ್ಲಿ, ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಟಿಪ್ಪಣಿ ಕೇವಲ ಶಿಫಾರಸಿನ ರೂಪದಲ್ಲಿದ್ದು, ಅದು ವರ್ಗಾವಣೆ ಆದೇಶ ಅಥವಾ ವರ್ಗಾವಣೆಗೆ ಒಪ್ಪಿಗೆ ನೀಡುವುದಾಗಿರುವುದಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಮತ್ತು ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳನ್ನು ಆಧರಿಸಿ ಸಕ್ಷಮ ಇಲಾಖೆಗಳು ಶಿಫಾರಸುಗಳನ್ನು ಪರಿಶೀಲಿಸಬೇಕು ಎಂದು ವಿವರಿಸಲಾಗಿತ್ತು.

ಹಾಲಿ ಪ್ರಕರಣದಲ್ಲಿ ಒಪ್ಪಿತ ವರ್ಗಾವಣೆಗೆ ಮುಖ್ಯಮಂತ್ರಿ ಕಾರ್ಯಾಲಯವು ಮಾಡಿರುವ ಶಿಫಾರಸು/ಟಿಪ್ಪಣಿಯು ಶಿಫಾರಸಿನ ರೂಪದಲ್ಲಿದ್ದು, ಅದು ಒಪ್ಪಿತ ವರ್ಗಾವಣೆ ಆದೇಶವಲ್ಲ. ಏಕಸದಸ್ಯ ನ್ಯಾಯಪೀಠ 2024ರ ಸೆಪ್ಟೆಂಬರ್ 9ರಂದು ಮಾಡಿರುವ ತೀರ್ಪನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಕಾರ್ಯಾಲಯ ಮತ್ತು ವರ್ಗಾವಣೆ ಮನವಿಗಳ ಬಗ್ಗೆ ನೋಡಿಕೊಳ್ಳುವ ಅಧಿಕಾರಿಗಳಿಗೆ ಈ ಕುರಿತು ಅರಿವು ಮೂಡಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ವಿವರಿಸಿದ್ದರು.

ವರ್ಗಾವಣೆ ಶಿಫಾರಸು/ಮನವಿಯನ್ನು ಸಂಬಂಧಿತ ಆಡಳಿತಾತ್ಮಕ ಇಲಾಖೆಯಲ್ಲಿ ಪರಿಶೀಲಿಸಲಿದ್ದು, ವರ್ಗಾವಣೆ ಮಾರ್ಗಸೂಚಿಯ ನಿಬಂಧನೆಗಳ ಅನುಗುಣವಾಗಿ ಹಾಗೂ ಸಕ್ಷಮ ಪ್ರಾಧಿಕಾರದ ಒಪ್ಪಿಗೆಯ ಮೇರೆಗೆ ಆಡಳಿತಾತ್ಮಕ ಇಲಾಖೆಯು ವರ್ಗಾವಣೆ ಆದೇಶವನ್ನು ಹೊರಡಿಸುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಪ್ರಕರಣವೇನು?
ಮುಖ್ಯಮಂತ್ರಿ ಅನುಮೋದನೆ ನೀಡಿದ್ದರೂ ಬೆಸ್ಕಾಂ ನನ್ನನ್ನು ನಿರ್ದಿಷ್ಟ ಉಪವಿಭಾಗಕ್ಕೆ ನಿಯೋಜಿಸಿಲ್ಲ. ಆದ್ದರಿಂದ, ಮುಖ್ಯಮಂತ್ರಿಗಳು ಸೂಚಿಸಿದಂತೆ ನನ್ನನ್ನು ನಿಯೋಜನೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಚೇತನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಮುಖ್ಯಮಂತ್ರಿಗಳ ಕಚೇರಿಯಿಂದ ಗ್ರೂಪ್ ‘ಬಿ’ ಹಾಗೂ ‘ಸಿ’ ವರ್ಗದ ನೌಕರರ ವರ್ಗಾವಣೆಗೆ ಹಲವು ಪತ್ರಗಳು ಬರುತ್ತಿರುವುದು ಹೈಕೋರ್ಟ್ ಗಮನಕ್ಕೆ ಬಂದಿದೆ. ಈ ಎಲ್ಲ ಆದೇಶಗಳು ಕಚೇರಿಯಿಂದ ಪಡೆದು ಹೊರಡಿಸಿರುವ ಆದೇಶಗಳು ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿದಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತಿರುವ ಯಾರೋ ಒಬ್ಬರು ಯಾಂತ್ರಿಕವಾಗಿ ಅಂತಹ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಆದ್ದರಿಂದ, ನೌಕರರು ಆತಂಕಿತರಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿ 2024ರ ಸೆಪ್ಟಂಬರ್ 9ರಂದು ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚೇತನ್‌ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Related Articles

Comments (0)

Leave a Comment