ರಸ್ತೆ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ತಡೆ; 50 ವರ್ಷಗಳ ಹಿಂದೆ ಕಾಲುವೆ ಇತ್ತೆಂಬ ಕಾರಣಕ್ಕೆ ತೆರವಿಗೆ ಮುಂದಾಗಿದ್ದ ಸರ್ಕಾರ
- by Jagan Ramesh
- March 20, 2026
- 6 Views
ಬೆಂಗಳೂರು: ಐದು ದಶಕಗಳ ಹಿಂದೆ ಕಾಲುವೆ ಇತ್ತು ಎಂಬ ಕಾರಣಕ್ಕೆ ಆನೇಕಲ್ ತಾಲೂಕಿನ ಅಳಿಬೊಮ್ಮಸಂದ್ರ ಮತ್ತು ಮುತಾನಲ್ಲೂರು ಅಮಾನಿಕೆರೆ ಗ್ರಾಮದ ನಡುವೆ ಹಾದುಹೋಗುವ ರಸ್ತೆ ತೆರವಿಗೆ ಮುಂದಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಆನೇಕಲ್ ತಹಶೀಲ್ದಾರ್ ಕ್ರಮಕ್ಕೆ ತಡೆ ನೀಡಿರುವ ಹೈಕೋರ್ಟ್, ರಸ್ತೆ ತೆರವು ಕಾರ್ಯಚರಣೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಿದೆ.
ಆನೇಕಲ್ ತಹಶೀಲ್ದಾರ್ ಅವರು ರಸ್ತೆ ತೆರವಿಗೆ ಮುಂದಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರ ಹೋಬಳಿಯ ಅಳಿಬೊಮ್ಮಸಂದ್ರ ಗ್ರಾಮದ ಆರ್. ಸುಜಾತಾ ಮತ್ತಿತರರು ಮೇಲ್ಮನವಿ ಸಲ್ಲಿಸಿ, ತುರ್ತು ವಿಚಾರಣೆಗೆ ಕೋರಿದ್ದರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಜೆಯಿದ್ದರೂ ಮೇಲ್ಮನವಿದಾರರ ಮನವಿ ಮೇರೆಗೆ ಮಾರ್ಚ್ 19ರಂದು ಮಧ್ಯಾಹ್ನ 3.30ಕ್ಕೆ ತುರ್ತು ಕಲಾಪ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಹಾಗೂ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಮೇಲ್ಮನವಿದಾರರ ಪರ ವಕೀಲ ಎ. ಮಧುಸೂದನ ರಾವ್ ವಾದ ಮಂಡಿಸಿ, ಮೇಲ್ಮನವಿದಾರರು ಅಳಿಬೊಮ್ಮಸಂದ್ರ ಗ್ರಾಮದ ಸರ್ವೇ ಸಂಖ್ಯೆ 21ರಲ್ಲಿನ 3 ಎಕರೆ 15 ಗುಂಟೆ ಜಮೀನಿನ ಮಾಲೀಕರಾಗಿದ್ದಾರೆ. ಜಮೀನು ದಕ್ಷಿಣ ಕಡೆಯಿಂದ ಮುತಾನಲ್ಲೂರು ಅಮಾನಿಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 30 ಅಡಿ ವಿಸ್ತೀರ್ಣದ ರಸ್ತೆ ಹಾದು ಹೋಗಲಿದೆ. ಆದರೆ, ಈ ರಸ್ತೆಯ ಜಾಗದಲ್ಲಿ 50 ವರ್ಷಗಳ ಹಿಂದೆ ಕಾಲುವೆ ಇತ್ತು. ಕಾಲುವೆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅದನ್ನು ತೆರವುಗೊಳಿಸುವಂತೆ ಸೂಚಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆನೇಕಲ್ ತಹಶೀಲ್ದಾರ್ಗೆ 2026ರ ಜನವರಿ 20ರಂದು ಪತ್ರ ಬರೆದಿದ್ದರು ಎಂದು ವಿವರಿಸಿದರು.
ಜಿಲ್ಲಾಧಿಕಾರಿಗಳ ಈ ಪತ್ರವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಪತ್ರವು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ನಡುವಿನ ಆಂತರಿಕ ಸಂವಹನವಾಗಿದೆ. ರಸ್ತೆಯ ಜಾಗವು ಕಾಲುವೆಗೆ ಸೇರಿದ್ದಾಗಿದ್ದು, ರಸ್ತೆ ತೆರವುಗೊಳಿಸಬೇಕು ಎಂಬ ಉದ್ದೇಶವು ಅಧಿಕಾರಿಗಳು ಹೊಂದಿದ್ದರೆ, ಆ ಸಂಬಂಧ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು ಎಂದು ತಿಳಿಸಿ 2026ರ ಮಾರ್ಚ್ 10ರಂದು ಅರ್ಜಿ ಇತ್ಯರ್ಥಪಡಿಸಿದೆ ಎಂದು ತಿಳಿಸಿದರು.
ನ್ಯಾಯಾಲಯದ ವಿಸ್ತೃತ ಆದೇಶ ಇನ್ನೂ ಬಿಡುಗಡೆಯಾಗದಿದ್ದರೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೈಕೋರ್ಟ್ ಕಾರ್ಯ ನಿರ್ವಹಿಸುವುದಿಲ್ಲ ಎಂಬ ಉದ್ದೇಶದಿಂದ ಅಧಿಕಾರಿಗಳು ರಸ್ತೆ ತೆರವುಗೊಳಿಸುತ್ತಿದ್ದಾರೆ. ಈಗಾಗಲೇ, ರಸ್ತೆಯ ಡಾಂಬರು ಕಿತ್ತುಹಾಕಲಾಗಿದೆ. ವಾಸ್ತವವಾಗಿ ರಸ್ತೆ ಜಾಗದಲ್ಲಿ ಕಾಲುವೆ ಇರಲಿಲ್ಲ. ಇದೀಗ ರಸ್ತೆ ತೆರವುಗೊಳಿಸಿದರೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಈಗಾಗಲೇ ಈ ಸುತ್ತಲಿನ ಜಾಗದಲ್ಲಿ ಸರ್ಕಾರದ ಅನುಮೋದನೆಯೊಂದಿಗೆ ಲೇಔಟ್ ನಿರ್ಮಿಸಲಾಗಿದೆ ಎಂದು ವಿವರಿಸಿ ಪೋಟೋಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಸರ್ಕಾರದ ಪರ ವಕೀಲರು, ಪ್ರಕರಣ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಸಲ್ಲಿಸಿದ ನಂತರ ಮೇಲ್ಮನವಿ ವಿಚಾರಣೆ ನೆಡಸಬೇಕು ಎಂದು ಕೋರಿದರು.
ಮೇಲ್ಮನವಿದಾರರು ಸಲ್ಲಿಸಿದ ಪೋಟೋಗಳನ್ನು ಪರಿಶೀಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶ ಪ್ರತಿಗೆ ಕಾಯದೆಯೇ, ರಸ್ತೆ ತೆರವಿಗೆ ಕೋರ್ಟ್ ಕಲಾಪ ನಡೆಯದ ದಿನಾಂಕವನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬ ಬಗ್ಗೆ ವಿವರಣೆ ನೀಡಿ ತಹಶೀಲ್ದಾರ್ ಅವರು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಪೊಲೀಸರಾಗಲಿ ಮುಂದಿನ ವಿಚಾರಣೆವರೆಗೆ ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳಬಾರದು. ತಹಶೀಲ್ದಾರ್ ಅವರು ಈ ರಸ್ತೆಯು ಸಂಚಾರಯೋಗ್ಯವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸ್ವತಂತ್ರರಿದ್ದಾರೆ ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)