ಪಾಲಿಕೆ ನೌಕರರಿಗೆ ಕೆಎಎಸ್ಎಸ್ ವಿಸ್ತರಣೆಗೆ ಮನವಿ; 2 ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Ramya B T
- March 17, 2026
- 12 Views
ಬೆಂಗಳೂರು: ರಾಜ್ಯದ ಎಲ್ಲ ನಗರ ಪಾಲಿಕೆಯ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್) ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮನವಿಯನ್ನು 2 ತಿಂಗಳಲ್ಲಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಸಲ್ಲಿಸಿದ್ದ ರಿಟ್ ಅರ್ಜಿವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಿ. ಶ್ರೀನಿವಾಸ್ ವಾದ ಮಂಡಿಸಿ, ರಾಜ್ಯದಲ್ಲಿ ನಗರ ಪಾಲಿಕೆಯ ನೌಕರರಿಗೂ ಕೆಎಎಸ್ಎಸ್ ವಿಸ್ತರಿಸುವಂತೆ ಕೋರಿ ಅರ್ಜಿದಾರ ಸಂಘವು 2026ರ ಫೆಬ್ರವರಿ 6ರಂದು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಹಾಗೂ ಫೆಬ್ರವರಿ 11ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಸಂಘದ ಈ ಮನವಿಯನ್ನು ಸರ್ಕಾರ ಈವರೆಗೂ ಪರಿಗಣಿಸಿಲ್ಲ ಮತ್ತು ಮನವಿ ಆಧರಿಸಿ ಯಾವುದೇ ಆದೇಶವನ್ನೂ ಮಾಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಸರ್ಕಾರದ ಪರ ವಕೀಲರು, ಸೂಕ್ತ ಕಾಲಾವಕಾಶ ಒದಗಿಸಿದರೆ ಅರ್ಜಿದಾರರ ಮನವಿ ಪರಿಗಣಿಸಿ, ಅಗತ್ಯ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳಲ್ಲಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
Related Articles
Thank you for your comment. It is awaiting moderation.


Comments (0)