ಜಡ್ಜ್‌ಗಳ ಕ್ವಾರ್ಟರ್ಸ್ ನಿರ್ಮಾಣಕ್ಕೆ ಪಶುವೈದ್ಯಕೀಯ ವಿವಿ ಭೂಮಿ ಹಂಚಿಕೆ ಪ್ರಶ್ನಿಸಿ ಪಿಐಎಲ್; ಸರ್ಕಾರಕ್ಕೆ ನೋಟಿಸ್

ಬೆಂಗಳೂರು: ನ್ಯಾಯಮೂರ್ತಿಗಳ ಕ್ವಾರ್ಟರ್ಸ್ ನಿರ್ಮಾಣಕ್ಕಾಗಿ ಹೆಬ್ಬಾಳ ಸಮೀಪ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ 4 ಎಕರೆ ಭೂಮಿ ಹಂಚಿಕೆ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

ಕರ್ನಾಟಕ ವೆಟರ್ನರಿ ಅಸೋಸಿಯೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಪಶು ವೈದ್ಯಕೀಯ ಇಲಾಖೆ, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ಇಲಾಖೆ, ವೆಟರ್ನರಿ ಕಾಲೇಜು, ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.

ಅರ್ಜಿಯಲ್ಲೇನಿದೆ?
ಮೈಸೂರು ಮಹಾರಾಜರು 1958ರಲ್ಲಿ ವೆಟರ್ನರಿ ಕಾಲೇಜು ಸ್ಥಾಪನೆ ಉದ್ದೇಶದಿಂದ ಭೂಮಿಯನ್ನು ಹಂಚಿಕೆ ಮಾಡಿದ್ದರು. ಅದರಂತೆ, ಅಲ್ಲಿ ಕಾಲೇಜು ಸ್ಥಾಪನೆಯಾಗಿತ್ತು. ಬಳಿಕ 2004ರಲ್ಲಿ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿಗಳ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿತ್ತು. ಜತೆಗೆ ವ್ಯಾಪಕ ಪ್ರಮಾಣದ ಸಂಶೋಧನಾ ಚಟುವಟಿಕೆ ಸಹ ನಡೆಯುತ್ತಿದ್ದವು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಭೂಮಿ ಕುರಿತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಪಶುಸಂಗೋಪನಾ ವಿಶ್ವವಿದ್ಯಾಲಯ ಜತೆ ಹಲವು ಸುತ್ತಿನ ವ್ಯಾಜ್ಯಗಳು ನಡೆದಿದ್ದವು. ಈ ಮಧ್ಯೆ, 2026ರ ಜನವರಿ 8ರಂದು ಸರ್ಕಾರ ವೆಟರ್ನರಿ ಕಾಲೇಜಿನ ವಶದಲ್ಲಿರುವ 4 ಎಕರೆ ಜಾಗವನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳ ಕ್ವಾರ್ಟರ್ಸ್ ನಿರ್ಮಾಣಕ್ಕೆ ಮತ್ತು 3 ಎಕರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರು ಮಾಡಿದೆ. ಇದು ನಿಯಮಗಳನ್ನು ಉಲ್ಲಂಘನೆ ಮಾಡಿರುವುದಲ್ಲದೆ, ಪಶು ಸಂಗೋಪನೆ ಉದ್ದೇಶಕ್ಕೆ ಮೀಸಲಾದ ಜಾಗವನ್ನು ಈ ರೀತಿ ಕಟ್ಟಡಗಳ ನಿರ್ಮಾಣಕ್ಕೆ ನೀಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಸರ್ಕಾರದ ಕ್ರಮದಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಆ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಗಿಡ-ಮರಗಳಿಂದ ಕೂಡಿರುವ ಹಸಿರಿನ ಪ್ರದೇಶವನ್ನು ಹಾಗೆಯೇ ಉಳಿಸಬೇಕು, ಸರ್ಕಾರದ ಭೂಮಿ ಹಂಚಿಕೆ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Related Articles

Comments (0)

Leave a Comment