ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಕೋರಿದ ಅರ್ಜಿ; ಸಂಘದ ನಿಲುವು ಕೇಳಿದ ಹೈಕೋರ್ಟ್
- by Prashanth Basavapatna
- February 25, 2026
- 13 Views
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಹಾಗೂ ಸಮಿತಿಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಸೂಕ್ತ ಮೀಸಲಾತಿ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಒಕ್ಕಲಿಗರ ಸಂಘಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಒಕ್ಕಲಿಗರ ಸಂಘದ ಸದಸ್ಯೆಯಾಗಿರುವ ಮೈಸೂರು ನಿವಾಸಿ ಸುಶೀಲಾ ನಂಜಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಸಂಘದ ಬೈಲಾ ತಿದ್ದುಪಡಿ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ. ಅದಾಗ್ಯೂ ಸರ್ಕಾರಕ್ಕೆ ಔಪಚಾರಿಕವಾಗಿ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಹೇಳಿತು.
ಜತೆಗೆ, ರಾಜ್ಯ ಒಕ್ಕಲಿಗರ ಸಂಘಕ್ಕೂ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನಿಲುವು ತಿಳಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.
ಮನವಿ ಏನು?
ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಅರ್ಜಿದಾರರು ಸಂಘಕ್ಕೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಸಂಘದ ಬೈಲಾಗಳಿಗೆ ಅಗತ್ಯ ತಿದ್ದುಪಡಿ ಮಾಡಲು ಸೂಚಿಸಬೇಕು. ಸಂಘದ ಆಡಳಿತ ಮಂಡಳಿ, ನಿರ್ದೇಶಕ ಮಂಡಳಿ ಹಾಗೂ ಇತರ ಸಮಿತಿಗಳ ಚುನಾವಣೆಗಳಲ್ಲಿ ಸಮಾನತೆಯ ತತ್ವದ ಆಧಾರದಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರಲು ಒಕ್ಕಲಿಗರ ಸಂಘಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Related Articles
Thank you for your comment. It is awaiting moderation.


Comments (0)