ರೀಲ್ಸ್, ಫೇಸ್‌ಬುಕ್ ಪೋಸ್ಟ್‌ಗಳಿಗಾಗಿ ಹಲ್ಲೆ, ಪೊಲೀಸರ ನಿಂದನೆ ಸಲ್ಲದು; ಪುನೀತ್‌ ಕೆರೆಹಳ್ಳಿಗೆ ಹೈಕೋರ್ಟ್ ಚಾಟಿ

ಬೆಂಗಳೂರು: ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಗೆ ತಡೆ‌ ನೀಡಿರುವ ಹೈಕೋರ್ಟ್, ರೀಲ್ಸ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳಿಗಾಗಿ ಹಲ್ಲೆ ನಡೆಸುವುದು ಅಥವಾ ಪೊಲೀಸರನ್ನು ನಿಂದಿಸುವುದನ್ನು ಒಪ್ಪಲಾಗದು ಪುನೀತ್ ಕೆರೆಹಳ್ಳಿ ವಿರುದ್ಧ ಕಿಡಿಕಾರಿದೆ.

ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪುನೀತ್‌ ಕೆರೆಹಳ್ಳಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಆರೋಪ ಪಟ್ಟಿಗೆ ತಡೆ ನೀಡಲಾಗಿದೆ. ಅರ್ಜಿದಾರರು ಎರಡು ವಾರದಲ್ಲಿ ಡಿಸಿಪಿ ಮುಂದೆ ಹಾಜರಾಗಿ ಬಾಂಡ್‌ ಒದಗಿಸಬೇಕು ಮತ್ತು ಹೇಳಿಕೆ ದಾಖಲಿಸಬೇಕು. ಇಲ್ಲವಾದಲ್ಲಿ ಈಗ ನೀಡಿರುವ ಮಧ್ಯಂತರ ಆದೇಶ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದ ನ್ಯಾಯಪೀಠ, ನ್ಯಾಯಾಂಗದ ಪರಿಶೀಲನೆಯಲ್ಲಿರುವ ಪ್ರಕರಣಗಳ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಪುನೀತ್ ಕೆರೆಹಳ್ಳಿಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪಿ.ಎನ್‌. ಮನಮೋಹನ್‌ ವಾದ ಮಂಡಿಸಿ, ಪ್ರಕರಣ ದಾಖಲಿಸಿ, ಅರ್ಜಿದಾರರಿಗೆ ಜನವರಿ 13ರಂದು ಅಂತಿಮ ನೋಟಿಸ್‌ ನೀಡಿ, ಜನವರಿ 16ರಂದು ಹಾಜರಾಗಲು ಸೂಚಿಸಲಾಗಿದೆ. ಆದರೆ, ಮರು ದಿನವೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅರ್ಜಿದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗಿಲ್ಲ ಎಂದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಬೇರೊಂದು ಪ್ರಕರಣದಲ್ಲಿ ಜಾಮೀನು ಸಂಬಂಧ ಬಾಂಡ್‌ ಸಲ್ಲಿಸುವಂತೆ ಆದೇಶ ಮಾಡಿರುವುದನ್ನು ಪುನೀತ್‌ ಪಾಲಿಸಿಲ್ಲ. ಈ ಸಂಬಂಧ ಸಮನ್ವಯ ನ್ಯಾಯಪೀಠ ಆದೇಶ ಮಾಡಿದೆ. ಅದಕ್ಕಾಗಿ ಪುನೀತ್‌ಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಅವರು ಹಾಜರಾಗಿ ಹೇಳಿಕೆ ನೀಡಲಿ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳವುದಿಲ್ಲ ಎಂದರಲ್ಲದೆ, ಸೋಲದೇವಹಳ್ಳಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧದ ಪ್ರಕರಣಗಳಿಗೆ ತಡೆ ನೀಡಿದ ಬಳಿಕ ಅವರು ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಗಳನ್ನು ಪೀಠದ ಮುಂದೆ ಇಡಲಾಗುವುದು ಎಂದರು.

ಆಗ ನ್ಯಾಯಪೀಠ ಪುನೀತ್ ಪರ ವಕೀಲರನ್ನು ಕುರಿತು, ಮತ್ತೆ ಗಲಾಟೆ ಮಾಡಿದ್ದೀರಾ? ಸುಮ್ಮನೆ ಇರಲು ಆಗುವುದಿಲ್ಲವೇ? ಪ್ರಕರಣ ನ್ಯಾಯಾಂಗದ ಪರಿಶೀಲನೆಯಲ್ಲಿರುವಾಗ ನೀವು ಹಾಗೆ ಮಾಡಲು ಹೇಗೆ ಸಾಧ್ಯ, ಯಾಕೆ ಹೀಗೆಲ್ಲ ಮಾಡುತ್ತೀರಿ, ಎಚ್ಚರಿಕೆ ಇರಬೇಕಲ್ಲವೇ, ನಿಮ್ಮ ವಿರುದ್ಧ ಪ್ರಕರಣ ವಜಾ ಮಾಡಲಾಗಿಲ್ಲ, ತಡೆಯನ್ನಷ್ಟೇ ನೀಡಲಾಗಿದೆ ಎಂದು ಹೇಳಿತು.

ಅದಕ್ಕೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರಿಗೆ ಸಲಹೆ ನೀಡಲಾಗುವುದು. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದರು. ಆಗ ನ್ಯಾಯಮೂರ್ತಿಗಳು, ಅಕ್ರಮ ವಲಸಿಗರ ವಿಚಾರವನ್ನು ಅರ್ಜಿದಾರರು ಎತ್ತಿದ್ದು, ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಯಾವುದೇ ವಿಚಾರವನ್ನು ಬಿಂಬಿಸುವ ರೀತಿಯಲ್ಲಿ ಬಿಂಬಿಸಬೇಕು ಎಂದರು‌

ಬಿ‌.ಎನ್. ಜಗದೀಶ್‌ ಅವರು, ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿ ಸಲ್ಲಿಸಲಾಗಿದೆ. ಸರ್ಕಾರ ಕ್ರಮಕೈಗೊಂಡಿದೆ. ಸರ್ಕಾರ ಕ್ರಮ ಕೈಗೊಂಡಿಲ್ಲ ಎನ್ನುವುದನ್ನು ಅರ್ಜಿದಾರರು ತೋರಿಸಲಿ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೆ ನ್ಯಾಯಪೀಠ, ದೂರು ನೀಡಿ, ಸರ್ಕಾರ ಕ್ರಮಕೈಗೊಳ್ಳದಿದ್ದರೆ ನೋಡೋಣ. ರೀಲ್ಸ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗೆ ಇದೆಲ್ಲವನ್ನೂ ಮಾಡಬಾರದು. ಅರ್ಜಿದಾರರು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿತು.

Related Articles

Comments (0)

Leave a Comment