ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣ; ಎಚ್.ಡಿ. ರೇವಣ್ಣ ವಿರುದ್ಧದ ಆರೋಪ ನಿಗದಿ ಪ್ರಕ್ರಿಯೆಗೆ ನೀಡಿದ್ದ ತಡೆ ತೆರವು

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ವಿರುದ್ಧದ ಆರೋಪ ನಿಗದಿ ಪ್ರಕ್ರಿಯೆ ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿದೆ. ಇದರಿಂದ, ವಿಚಾರಣಾ ನ್ಯಾಯಾಲಯದಲ್ಲಿ ರೇವಣ್ಣ ವಿರುದ್ಧ ಆರೋಪ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ.

ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಮೈಸೂರು ಜಿಲ್ಲೆಯ ಕೆ.ಆರ್‌. ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ರದ್ದು ಕೋರಿ ಎಚ್‌.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು.

ರೇವಣ್ಣ ವಿರುದ್ಧದ ಆರೋಪ ನಿಗದಿ ಪ್ರಕ್ರಿಯೆ ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ 2026ರ ಜನವರಿ 29ರಂದು ಮಧ್ಯಂತರ ಆದೇಶ ಮಾಡಿದ್ದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ವೇಳೆ, ಅಂದರೆ ಫೆಬ್ರವರಿ 5ರಂದು ವಾದ ಮಂಡಿಸಬೇಕು ಎಂದು ರೇವಣ್ಣ ಪರ ವಕೀಲರಿಗೆ ನಿರ್ದಿಷ್ಟ ಸೂಚನೆ ನೀಡಿತ್ತು. ಆದರೆ, ರೇವಣ್ಣ ಪರ ವಕೀಲರು ಗುರುವಾರ ಮೆಮೊ ಸಲ್ಲಿಸಿ, ವಿಚಾರಣಾ ನ್ಯಾಯಾಲಯದಲ್ಲಿ ಹಾಜರಾಗಬೇಕಿರುವುದರಿಂದ ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು. ಇದರಿಂದ, ಅಸಮಾಧಾನಗೊಂಡ ನ್ಯಾಯಪೀಠ, ಮಧ್ಯಂತರ ಆದೇಶ ತೆರವುಗೊಳಿಸಿತಲ್ಲದೆ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ನ್ಯಾಯಪೀಠ ರೇವಣ್ಣ ಪರ ವಕೀಲ ಬಿ.ಎಂ. ಗಿರೀಶ್‌ ಕುಮಾರ್‌ ಅವರನ್ನು ಕುರಿತು, ಆರೋಪ ಮುಕ್ತಿ ಕೋರುವ ಸ್ವಾತಂತ್ರ್ಯ ನೀಡಲಾಗುವುದು ಸಕ್ಷಮ ನ್ಯಾಯಾಲಯದಲ್ಲಿ ಹೋಗಿ ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ಕೊಡುವ ದಿನಾಂಕದ ಸಿದ್ಧರಾಗಿ ವಿಚಾರಣೆಗೆ ಹಾಜರಾಗಿ ಎಂದು ತೀಕ್ಷ್ಣವಾಗಿ ನುಡಿಯಿತು.

ನೀವು ದಂಡ ತೆರಲೇಬೇಕು, ವಿಚಾರಣೆ ನಡೆಸಲು ಇಲ್ಲಿ ನೂರಾರು ಪ್ರಕರಣಗಳಿವೆ. ಕಳೆದ ಬಾರಿ ಏಕೆ ಸಿದ್ಧರಾಗಿರಲಿಲ್ಲ? ಹೈಕೋರ್ಟ್‌ ಮುಂದೆ ವಿಚಾರಣೆ ಮುಂದೂಡಿಕೆಗೆ ಯಾವ ರೀತಿಯ ಮನವಿ ಮಾಡುತ್ತಿದ್ದೀರಿ? ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹೋಗಬೇಕು. ಅದಕ್ಕಾಗಿ ವಿಚಾರಣೆ ಮುಂದೂಡಬೇಕು ಎಂದು ಹೈಕೋರ್ಟ್‌ನಲ್ಲಿ ಕೇಳುತ್ತಿದ್ದೀರಿ, ಹೈಕೋರ್ಟ್‌ ಮಹತ್ವವನ್ನು ಕ್ಷೀಣವಾಗಿಸಬೇಡಿ. ಇಲ್ಲಿ ಅಹಂನ ವಿಚಾರವಿಲ್ಲ ಎಂದು ಕಿಡಿಕಾರಿತು.

ಮೆಮೊ ಒಪ್ಪದ ಹೈಕೋರ್ಟ್:
ವಿಚಾರಣಾ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಆರೋಪ ನಿಗದಿಪಡಿಸಬಾರದು ಎಂದು 2025ರ ಜನವರಿ 30ರಂದು ಮಧ್ಯಂತರ ಆದೇಶ ಮಾಡಲಾಗಿದ್ದು, ಅದು 2025ರ ಫೆಬ್ರವರಿ 7ರವರೆಗೆ ಚಾಲ್ತಿಯಲ್ಲಿತ್ತು. ಅಂದು ಅರ್ಜಿ ವಿಚಾರಣೆಗೆ ನಿಗದಿಯಾಗಿರಲಿಲ್ಲ. ಹಾಗಾಗಿ, ಮಧ್ಯಂತರ ಆದೇಶ ವಿಸ್ತರಣೆಯಾಗಿರಲಿಲ್ಲ. ಆನಂತರ ಪ್ರಕರಣ 2026ರ ಜನವರಿ 29ರಂದು ವಿಚಾರಣೆಗೆ ಪಟ್ಟಿಯಾಗಿತ್ತು. ಅಂದು ಈ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಆರೋಪ ನಿಗದಿ ಮಾಡಬಾರದು ಎಂದು ಆದೇಶಿಸಿತ್ತು. ಅಲ್ಲದೇ, ಮುಂದಿನ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಇಂದು ಅರ್ಜಿದಾರರ ಪರ ವಕೀಲರು, ವಿಚಾರಣಾ ನ್ಯಾಯಾಲಯದಲ್ಲಿ ವಕೀಲರನ್ನು ವಿಚಾರಣೆಗೆ ನಿಯೋಜಿಸಲಾಗಿದೆ. ಆದ್ದರಿಂದ, ಇಲ್ಲಿ ವಿಚಾರಣೆ ಮುಂದೂಡಬೇಕು ಎಂದು ಮೆಮೊ ಸಲ್ಲಿಸಿದ್ದಾರೆ. ಹೈಕೋರ್ಟ್‌ಗೆ ಇಂಥ ಮೆಮೊ ಸಲ್ಲಿಸಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಅರ್ಜಿದಾರರು ವಾದ ಮಂಡಿಸಲು ಸಿದ್ಧರಿಲ್ಲ ಮತ್ತು ಹಿಂದಿನ ವಿಚಾರಣೆಯಲ್ಲೂ ಅರ್ಜಿದಾರರ ವಕೀಲರು ವಾದ ಮಂಡಿಸಲು ಸಿದ್ಧರಿರಲಿಲ್ಲ. ಕಳೆದ ವಿಚಾರಣೆ ವೇಳೆಯೇ, ನಿರ್ದಿಷ್ಟ ದಿನದಂದು ವಾದ ಮಂಡಿಸಲು ಸಿದ್ಧವಾಗುವಂತೆ ಅರ್ಜಿದಾರರಿಗೆ ಸೂಚಿಸಿದ್ದರೂ ಅವರು ಸಿದ್ಧರಾಗಿಲ್ಲ. ಈಗ ಮತ್ತೆ ವಕೀಲರು ವಿಚಾರಣೆ ಮುಂದೂಡಿಕೆ ಕೋರಿದ್ದಾರೆ. ಇದಕ್ಕೆ ನ್ಯಾಯಾಲಯ ಒಪ್ಪಿಲ್ಲ. ವಿಚಾರಣೆಗೆ ಅಸಮರ್ಥನೀಯ ಮನವಿ ಮಾಡಲಾಗಿದೆ. ಆದ್ದರಿಂದ, ಚಾಲ್ತಿಯಲ್ಲಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Related Articles

Comments (0)

Leave a Comment