ಮನೆ ತೆರವುಗೊಳಿಸುವ ಮುನ್ನ ಸರ್ಕಾರ ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು; ಹೈಕೋರ್ಟ್ ಮೌಖಿಕ ಅಭಿಪ್ರಾಯ
- by Jagan Ramesh
- January 29, 2026
- 17 Views
ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿ ಜನ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೂ, ಅವುಗಳನ್ನು ತೆರವುಗೊಳಿಸುವ ಮುನ್ನ ಸರ್ಕಾರ ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಮನೆಗಳ ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಸಂತ್ರಸ್ತರಿಗೆ ಸೂರು ಕಲ್ಪಿಸಲು ಏನು ಮಾಡಲಾಗಿದೆ ಎಂಬುದನ್ನು ತಿಳಿಸಬೇಕು. ಅರ್ಜಿದಾರರು ಅಕ್ರಮವಾಗಿ ಮನೆ ನಿರ್ಮಿಸಿದ್ದರೂ ಸರ್ಕಾರ ಅಲ್ಲಿಗೆ ತೆರಳಿ ತೆರವು ಮಾಡುವುದಕ್ಕೂ ಮುನ್ನ ಪ್ರಕ್ರಿಯೆ ಪಾಲಿಸಬೇಕಿತ್ತು. ಎಷ್ಟು ಜನರು ಇದ್ದಾರೆ ಎಂಬ ಸಮೀಕ್ಷೆಯನ್ನು ಸರ್ಕಾರ ನಡೆಸಬೇಕಿತ್ತು. ಎಷ್ಟು ಜನರಿಗೆ ವ್ಯವಸ್ಥೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ. ಜತೆಗೆ, 2018ರಲ್ಲಿ ಅಲ್ಲಿನ 40ಕ್ಕೂ ಹೆಚ್ಚು ನಿವಾಸಿಗಳಿಗೆ ಜಾಗವನ್ನು ತಾತ್ಕಾಲಿಕ ಹಂಚಿಕೆ ಮಾಡಿರುವ ಸಂಬಂಧ ಪತ್ರ ನೀಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದಕ್ಕೂ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಒತ್ತುವರಿ ತೆರವಿಗೂ ಮುನ್ನ ಸರ್ಕಾರ ಸಮೀಕ್ಷೆ ನಡೆಸಿದೆಯೇ? ಎಷ್ಟು ಜನರು ಅಲ್ಲಿದ್ದರು ಎಂಬುದನ್ನು ಪತ್ತೆ ಮಾಡಿತ್ತೇ? ಪುನರ್ವಸತಿ ಕಲ್ಪಿಸಿರುವ ಸ್ಥಳದಲ್ಲಿ ಸೌಲಭ್ಯವಿಲ್ಲ. 200ಕ್ಕೂ ಹೆಚ್ಚು ಜನರಿದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಿಲ್ಲ ಎಂದರು. 2013ರ ವೇಳೆ ವಿವಾದಿತ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿರಲಿಲ್ಲ. ಆದರೆ, ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಆ ಜಾಗದಲ್ಲಿ ಜನರು ಜೋಪಡಿಗಳಲ್ಲಿ ನೆಲೆಸಿದ್ದರು. 28 ವರ್ಷಗಳ ಹಿಂದೆ 110 ಮನೆ ಇದ್ದವು, ತೆರವು ಕಾರ್ಯಾಚರಣೆ ನಡೆಸುವಾಗ 300 ಮನೆಗಳಿದ್ದವು ಎಂದು ಅರ್ಜಿಯಲ್ಲಿ ವಿವರಿಸಿದ್ದೇವೆ. ಈ ಜಾಗಕ್ಕೆ ಸಂಬಂಧಿಸಿದಂತೆ 2018ರಲ್ಲಿ 40ಕ್ಕೂ ಹೆಚ್ಚು ನಿವಾಸಿಗಳಿಗೆ ತಾತ್ಕಾಲಿಕ ಹಂಚಿಕೆ ಪತ್ರ ನೀಡಲಾಗಿದೆ. ಅಕ್ರಮ ಒತ್ತುವರಿ ತೆರವು ಮಾಡುವಾಗ 15 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು ಎಂಬ ನಿಯಮ ಇದೆ. ಅದನ್ನು ಪಾಲಿಸಲಾಗಿಲ್ಲ ಎಂದು ದೂರಿದರು.
ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ವಿವಾದಿತ ಸ್ಥಳವನ್ನು ಕಲ್ಲು ಕ್ವಾರಿಗೆ ನೀಡಲಾಗಿತ್ತು. ಪರವಾನಗಿ ಮುಗಿದ ಮೇಲೆ ಬಿಬಿಎಂಪಿಗೆ ಘನತ್ಯಾಜ್ಯ ವಿಲೇವಾರಿಗೆ ಹಂಚಿಕೆ ಮಾಡಲಾಗಿತ್ತು. 2013, 2014 ಆನಂತರದ ವರ್ಷಗಳಲ್ಲಿ ಎಷ್ಟೆಷ್ಟು ಮನೆಗಳು ತಲೆ ಎತ್ತಿವೆ ಎಂಬುದರ ಕುರಿತಾದ ಉಪಗ್ರಹ ಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. 14.03 ಎಕರೆಯನ್ನು ಬಿಬಿಎಂಪಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಅದು ಕೊಳಚೆ ನೀರು (ಲಿಚಿಡ್ ಪಾಂಡ್) ನಿಲ್ಲುವ ಸ್ಥಳವಾಗಿತ್ತು ಎಂದರು.
ಸಂತ್ರಸ್ತರಿಗೆ ಪುನವರ್ಸತಿ ಕಲ್ಪಿಸುವ ಕೆಲಸ ನಡೆಯುತ್ತಿದೆಯೇ? ಸೂರು ಮೂಲಭೂತ ಅಗತ್ಯಗಳಲ್ಲಿ ಒಂದು. ಜನರಿಗೆ ಸೂರು ಕಲ್ಪಸಿದೇ ಇರಲಾಗದು. ಸೂರು ಕಳೆದುಕೊಂಡಿರುವವರು ಎಲ್ಲಿದ್ದಾರೆ? ಅವರಿಗೆ ಹೇಗೆ ವ್ಯವಸ್ಥೆ ಮಾಡಲಾಗಿದೆ? ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅಡ್ವೊಕೇಟ್ ಜನರಲ್, ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿರುವ ಕುಟುಂಬಗಳು, ಅಲ್ಲಿರುವ ಜನರು, ವೈದ್ಯಕೀಯ ಮತ್ತು ಉಪಹಾರ ವ್ಯವಸ್ಥೆ ಮಾಡಿರುವ ಕುರಿತು ಜನವರಿ 22ರಂದು ಸಮಗ್ರ ಪ್ರಮಾಣಪತ್ರ ಸಲ್ಲಿಸಲಾಗಿದೆ. ನ್ಯಾಯಾಲಯದ ನಿರ್ದೇಶನದ ಪ್ರಕಾರ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರಲ್ಲದೆ, ಇದಕ್ಕೆ ಪೂರಕ ದಾಖಲೆ, ಚಿತ್ರ-ವಿಡಿಯೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)