ಬಸವಣ್ಣಗೆ ಅಪಮಾನ ಆರೋಪ; ‘ಬಸವ ಮಂಟಪ’ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಬಸವಣ್ಣ ಹಾಗೂ ಅವರ ವಚನಗಳನ್ನು ಅಪಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ಅಮೆರಿಕ ಮೂಲದ ಕನ್ನಡ ಲೇಖಕ ರವಿ ಹಂಜಗಿಮಠ ಅಲಿಯಾಸ್‌ ರವಿ ಹಂಜ್ ಹಾಗೂ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಬೆಂಗಳೂರಿನ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಅವರು ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪುರಸ್ಕರಿಸಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ರವಿ ಹಂಜ್‌ ಅವರು, ತಮ್ಮ ಹೇಳಿಕೆಗಳು ಐತಿಹಾಸಿಕ ದಾಖಲೆಗಳ ಅಧ್ಯಯನ, ಸಂಶೋಧನೆ ಹಾಗೂ ವೈಯಕ್ತಿಕ ಜ್ಞಾನವನ್ನು ಆಧರಿಸಿವೆ. ಬಸವಣ್ಣನವರನ್ನು ಅವಮಾನಿಸುವ ಅಥವಾ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ತಮಗಿರಲಿಲ್ಲ. ತಮ್ಮ ಬರಹಗಳು ಐತಿಹಾಸಿಕ ದೃಷ್ಟಿಕೋನ, ಶೈಕ್ಷಣಿಕ ಅಭಿಪ್ರಾಯ ಹಾಗೂ ಸಾಹಿತ್ಯಿಕ ಚಿಂತನೆಗಳ ಅಭಿವ್ಯಕ್ತಿಯಾಗಿದ್ದು, ಸಂವಿಧಾನದ 19(1)(ಎ)ನೇ ವಿಧಿ ಅಡಿಯಲ್ಲಿ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುತ್ತವೆ ಎಂದು ಅವರು ಪ್ರತಿಪಾದಿಸಿದ್ದರು.

ಐತಿಹಾಸಿಕ ವಿಚಾರಗಳು ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ಅದನ್ನು ಅಪರಾಧವೆಂದು ಪರಿಗಣಿಸಲಾಗದು. ಅಪರಾಧ ಎಸಗುವ ಉದ್ದೇಶವಿರುವುದನ್ನು ಸಾಬೀತುಪಡಿಸದೆ ತಮ್ಮ ವಿರುದ್ಧದ ಆರೋಪಗಳನ್ನು ಸಮರ್ಥಿಸಲಾಗದು ಎಂದು ಅರ್ಜಿಯಲ್ಲಿ ವಾದಿಸಿದ್ದರು.

ಪ್ರಕರಣದ ಎರಡನೇ ಆರೋಪಿ ವಿಶ್ವೇಶ್ವರ ಭಟ್ ಅವರು, ತಾವು ಪುಸ್ತಕದ ಲೇಖಕರೂ ಅಲ್ಲ, ಅದರಲ್ಲಿನ ಲೇಖನಗಳ ಕರ್ತೃವೂ ಅಲ್ಲ. ಲೇಖನಗಳ ಪ್ರಕಟಣೆಗೆ ವೇದಿಕೆ ಕಲ್ಪಿಸಿದ್ದಷ್ಟೇ ತಮ್ಮ ಪಾತ್ರವಾಗಿದೆ. ತಮ್ಮ ವಿರುದ್ಧದ ಆರೋಪಗಳು ಯಾವುದೇ ಅಪರಾಧದ ಅಗತ್ಯ ಅಂಶಗಳನ್ನು ಒಳಗೊಂಡಿಲ್ಲ. ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಿ, ತಮ್ಮ ಹೆಸರು ಹಾಗೂ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಆಕ್ಷೇಪಿಸಿದ್ದರು.

ಆರೋಪವೇನು?
ಬಸವ ಸಮಿತಿಯ ಅಧ್ಯಕ್ಷ ಅರವಿಂದ್ ಜತ್ತಿ ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2026ರ ನವೆಂಬರ್ 13ರಂದು ವಿಶ್ವವಾಣಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ರವಿ ಹಂಜ್ ಅವರು ಬಸವಣ್ಣ ಹಾಗೂ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ನವೆಂಬರ್ 15ರಂದು ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಬಿಡುಗಡೆ ಮಾಡಲಾದ ‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರ ಅನುಯಾಯಿಗಳು, ಲಿಂಗಾಯತ ಸಮುದಾಯ ಹಾಗೂ ಇತರ ಗೌರವಾನ್ವಿತ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳಿವೆ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ 192, 196(1), 353(2) ಮತ್ತು 299ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Comments (0)

Leave a Comment