ಪರಪ್ಪನ ಅಗ್ರಹಾರ ಜೈಲಿನ ವಿಡಿಯೊ ಸೋರಿಕೆ ಪ್ರಕರಣ; ಸಿಸಿಬಿ ಪೊಲೀಸರ ಮುಂದೆ ಹಾಜರಾಗಲು ನಟ ಧನ್ವೀರ್‌ಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಡಿಯೊ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 30ರಂದು ಬೆಳಗ್ಗೆ 11 ಗಂಟೆಗೆ ಸಿಸಿಬಿ ಪೊಲೀಸರ ಮುಂದೆ ಹಾಜರಾಗುವಂತೆ ನಟ ಧನ್ವೀರ್‌ಗೆ ಹೈಕೋರ್ಟ್ ಸೂಚಿಸಿದೆ.

ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಹೊರಡಿಸಲಾಗಿರುವ ಜಾಮೀನುರಹಿತ ವಾರಂಟ್‌ (ಎನ್‌ಬಿ‌ಡಬ್ಲ್ಯು) ರದ್ದು ಕೋರಿ ಧನ್ವೀರ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರಾಸಿಕ್ಯೂಷನ್ ಪರ ಹಾಜರಾದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಅನೂಪ್‌ ಕುಮಾರ್‌, ವಾರಂಟ್‌ಗೆ ಹೈಕೋರ್ಟ್‌ ತಡೆ ನೀಡಿದ್ದರೂ ಧನ್ವೀರ್‌ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆಕ್ಷೇಪಿಸಿದರಲ್ಲದೆ, ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸುವಂತೆ ಅವರಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಈ ಮನವಿ ಪರಿಗಣಿಸಿದ ನ್ಯಾಯಪೀಠ, ನವೆಂಬರ್ 30ರಂದು ನಿಗದಿತ ಸಮಯಕ್ಕೆ ಸಿಸಿಬಿ ಪೊಲೀಸರ ಮುಂದೆ ಹಾಜರಾಗುವಂತೆ ಧನ್ವೀರ್‌ಗೆ ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಪರಪ್ಪನ ಅಗ್ರಹಾರ ಜೈಲಿನ ಕೈದಿಗಳು ಮೊಬೈಲ್‌ ಬಳಸುತ್ತಿರುವ ದೃಶ್ಯಗಳು ಹೊರಬಂದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಡಿಯೊ ಹರಿದಾಡಲು ಧನ್ವೀರ್‌ ಅವರ ಮೊಬೈಲ್‌ ಬಳಕೆಯಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಹಿಂದೆ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ವಿಚಾರಣೆ ವೇಳೆ ವಶಪಡಿಸಿಕೊಂಡ ಮೊಬೈಲ್‌ನಲ್ಲಿ ವಿಡಿಯೊಗಳು ಪತ್ತೆಯಾಗದ ಕಾರಣ, ಅಳಿಸಲಾದ ಮಾಹಿತಿಯನ್ನು ಮರುಪಡೆಯಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಬಳಿಕ ದೊರೆತ ಮೊಬೈಲ್‌ ಮಾಹಿತಿ ಮರುಪಡೆಯುವಿಕೆ ವರದಿಯಲ್ಲಿ ತನಿಖೆಗೆ ಪೂರಕ ಅಂಶಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ.

Related Articles

Comments (0)

Leave a Comment