ನಿಯಮಬಾಹಿರ ಖಾಸಗಿ ಶಾಲೆ, ಮದರಸಾ ವಿರುದ್ಧ ಕ್ರಮಕ್ಕೆ ಕೋರಿದ ಪಿಐಎಲ್; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Prashanth Basavapatna
- November 19, 2026
- 10 Views
ಬೆಂಗಳೂರು: ನಗರದ ಥಣಿಸಂದ್ರದಲ್ಲಿ ನಿಯಮಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿರುವ ಜಾಮಿಯಾ ಮೊಹಮ್ಮದೀಯಾ ಮನ್ಸೂರಾ ರೆಸಿಡೆನ್ಸಿಯಲ್ ಸ್ಕೂಲ್ (ಮದರಸಾ) ಹಾಗೂ ಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ವಿರುದ್ಧ ಕಾನೂನು ಕ್ರಮಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ನಗರದ ಪಾದರಾಯನಪುರ ನಿವಾಸಿ ಚಾಂದ್ ಪಾಷಾ ಎಂಬವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಗೃಹ ಇಲಾಖೆ, ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮುಂಬೈ ಮೂಲದ ಅಲ್ ಜಾಮೀಯಾ ಎಜುಕೇಷನಲ್ ಸೊಸೈಟಿ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿದೆ ಎನ್ನಲಾಗಿರುವ ಅಲ್ ಜಾಮೀಯಾ ಮೊಹಮ್ಮದಿಯ ಎಜುಕೇಷನ್ ಸೊಸೈಟಿಯ ಅಡಿಯಲ್ಲಿ ಬೆಂಗಳೂರಿನ ಥಣಿಸಂದ್ರದಲ್ಲಿ ‘ಜಾಮಿಯಾ ಮೊಹಮ್ಮದೀಯಾ ಮನ್ಸೂರಾ ರೆಸಿಡೆನ್ಸಿಯಲ್ ಸ್ಕೂಲ್’ (ಮದರಸಾ) ಹಾಗೂ ‘ಸಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್’ ನಡೆಸಲಾಗುತ್ತಿದೆ. ಸಂಸ್ಥೆಯು ಮಹಾರಾಷ್ಟ್ರ ಸೊಸೈಟಿಗಳ ನೋಂದಣಿ ಕಾಯ್ದೆ-1979ರ ಅಡಿ ನೋಂದಣಿಯಾಗಿರುವುದಾಗಿ ಹೇಳಿಕೊಂಡಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಸೂಕ್ತ ನೋಂದಣಿ ಇಲ್ಲದೆ ನಡೆಯುತ್ತಿದ್ದ ಈ ಸಂಸ್ಥೆಗಳ ಮಾನ್ಯತೆಯನ್ನು 2025ರ ಮೇ 30ರಂದು ಶಿಕ್ಷಣ ಇಲಾಖೆ ರದ್ದುಪಡಿಸಿದೆ. ಅದಾಗ್ಯೂ, ಅಕ್ರಮವಾಗಿ ಶಾಲೆ ಮತ್ತು ಮದರಸಾವನ್ನು ಮುಂದುವರಿಸಲಾಗುತ್ತಿದ್ದು, ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ವಲಸೆ ಕಾರ್ಮಿಕರ ಮಕ್ಕಳೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಾನ್ಯತೆ ರದ್ದಾಗಿದ್ದರೂ ಈ ಸಂಸ್ಥೆಗೆ ಸರ್ಕಾರದಿಂದ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿದಾರರ ಮನವಿ:
ಅಕ್ರಮವಾಗಿ ನಡೆಯುತ್ತಿರುವ ಮದರಸಾ ಮತ್ತು ಶಾಲೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶಿಸಬೇಕು. ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು. ಅಲ್ ಜಾಮೀಯಾ ಮೊಹಮ್ಮದೀಯಾ ಎಜುಕೇಷನಲ್ ಸೊಸೈಟಿ ವಿರುದ್ಧ ಸಮಗ್ರ ತನಿಖೆ ನಡೆಸಲು ನಿರ್ದೇಶಿಸಬೇಕು ಹಾಗೂ ಇಡೀ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು. ಸಂಸ್ಥೆಗೆ ಬಿಡುಗಡೆ ಮಾಡಲಾಗಿರುವ 5 ಲಕ್ಷ ರೂ. ಸರ್ಕಾರಿ ಅನುದಾನವನ್ನು ಹಿಂಪಡೆಯಲು ಹಾಗೂ ತಕ್ಷಣ ಮದರಸಾ ಮತ್ತು ಶಾಲೆ ಸ್ಥಗಿತೊಳಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
pil-against-illegal-school-madrasa-bengaluru-hck-notice
Illegal Madrasa, Karnataka HC, PIL, Notice, ಅಕ್ರಮ ಮದರಸಾ, ಹೈಕೋರ್ಟ್, ಪಿಐಎಲ್, ನೋಟಿಸ್
Related Articles
Thank you for your comment. It is awaiting moderation.


Comments (0)