ಜನಪರ ಹೋರಾಟದ ಮೂಲಕವೇ ನಿಜವಾದ ಜನನಾಯಕನಾಗಲು ಸಾಧ್ಯ: ಡಾ. ರವಿ ಸಿ.ಟಿ.
- by Legal Samachar
- November 18, 2026
- 3 Views
ಚಿಕ್ಕಮಗಳೂರು: ಜನಪರ ಕಾರ್ಯ ಮತ್ತು ಹೋರಾಟದ ಮೂಲಕವೇ ನಿಜವಾದ ಜನನಾಯಕನಾಗಿ ಬೆಳೆಯಲು ಸಾಧ್ಯ. ಸ್ಥಳೀಯವಾಗಿ ನಾಯಕತ್ವದ ಕೊರತೆ ಕಂಡುಬಂದಲ್ಲಿ ಕಾರ್ಯಕರ್ತರೇ ಜವಾಬ್ದಾರಿ ವಹಿಸಿಕೊಂಡು ಜನರ ನಡುವೆ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಕರೆ ನೀಡಿದರು.
ಚಿಕ್ಕಮಗಳೂರು ಪಕ್ಷದ ಜಿಲ್ಲಾ ಕಾರ್ಯಾಲಯ ಪಾಂಚಜನ್ಯದಲ್ಲಿ ನಡೆದ ಜಾಗರ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಮತ್ತು ಅಧಿಕಾರದ ಆಸೆಗಳಿಗೆ ಅವಕಾಶ ನೀಡಬಾರದು. ಪಕ್ಷದ ಸಿದ್ಧಾಂತಕ್ಕೆ ಆದ್ಯತೆ ನೀಡಿದಾಗ ಗುಂಪುಗಾರಿಕೆ ಮತ್ತು ಭಿನ್ನಾಭಿಪ್ರಾಯಗಳನ್ನು ತಪ್ಪಿಸಬಹುದು ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಚುನಾವಣೆಯ ಸಾಧ್ಯತೆ ಮತ್ತು ಮೀಸಲಾತಿ ಸ್ಪಷ್ಟವಾದ ಬಳಿಕ ಸ್ಥಳೀಯರಿಗೆ ಟಿಕೆಟ್ ನೀಡುವ ಕುರಿತು ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಎಸ್ಐಆರ್ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಟೀಕಿಸಿದ ಅವರು, ಕರ್ನಾಟಕದಲ್ಲಿ 99.32 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟ ಪ್ರಕ್ರಿಯೆಯಲ್ಲಿ ರಾಜ್ಯದ ಬೂತ್ ಮಟ್ಟದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಪಾತ್ರವಿದೆ ಎಂದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ 85 ಸಾವಿರ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ 37 ಸಾವಿರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಬೂತ್ ಸಮಿತಿಗಳ ಕಾರ್ಯವೈಖರಿ ಪರಿಶೀಲಿಸಿ ನಿಷ್ಕ್ರಿಯ ಸಮಿತಿಗಳಲ್ಲಿ ಬದಲಾವಣೆ ಮಾಡಬೇಕು. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಬೇಕು ಎಂದರು.
2018ರಿಂದ 2023ರ ಅವಧಿಯಲ್ಲಿ ಜಾಗರ ಮಹಾಶಕ್ತಿ ಕೇಂದ್ರ ವ್ಯಾಪ್ತಿಗೆ ನೀಡಿದ್ದ ಅಭಿವೃದ್ಧಿ ಅನುದಾನ ಮತ್ತು ಪ್ರಸ್ತುತ ಸರ್ಕಾರದ ಅನುದಾನವನ್ನು ಹೋಲಿಕೆ ಮಾಡಿ ಜನರ ಮುಂದೆ ಚರ್ಚಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸೀತಾರಾಮ ಭರಣ್ಯ, ಹೊಸಪೇಟೆ ದೇವರಾಜು, ರಾಜೀವ್, ಪ್ರಕಾಶ್ ಬಿಳೇಕಲ್ಲಹಳ್ಳಿ, ಸುರೇಶ್ ದೇವರಹಳ್ಳಿ, ತೋಟದಹಳ್ಳಿ ಶಿವಣ್ಣ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Comments (0)