ಯೋಗೀಶ ಗೌಡರ್ ಕೊಲೆ ಪ್ರಕರಣ; ಚನ್ನಕೇಶವ ಟಿಂಗರೀಕರ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- by Prashanth Basavapatna
- June 18, 2026
- 2 Views
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೊಗೀಶ ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ತನಿಖಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ, ಅಸಲಿ ಸಾಕ್ಷಿಗಳನ್ನು ಮರೆಮಾಚಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಆರೋಪದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಕೋರಿ ಚನ್ನಕೇಶವ ಟಿಂಗರೀಕರ್ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಜಿ. ಬಸರವಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಅರ್ಜಿದಾರರ ಮೇಲಿದೆ. ಅದಕ್ಕೆ ಐಪಿಸಿ ಸೆಕ್ಷನ್ 201 ಮತ್ತು 218 ಅಡಿ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನು ಮಂಜೂರು ಮಾಡಬಹುದಾದ ಪ್ರಕರಣಗಳಾಗಿವೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಇದಕ್ಕೆ ಸಿಬಿಐ ಪರ ಹಾಜರಿದ್ದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
Related Articles
Thank you for your comment. It is awaiting moderation.


Comments (0)