ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಪರ ವಕಾಲತ್ತಿನಿಂದ ಹಿಂದೆ ಸರಿಯುವುದಾಗಿ ಹೈಕೋರ್ಟ್‌ಗೆ ತಿಳಿಸಿದ ವಕೀಲ ಸುನೀಲ್ ಕುಮಾರ್
- by LegalSamachar
- June 18, 2026
- 4 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ಅವರು ದರ್ಶನ್ ಪರ ವಕಾಲತ್ತಿನಿಂದ ನಿವೃತ್ತಿ ಪಡೆಯುವುದಾಗಿ ಹೈಕೋರ್ಟ್ ತಿಳಿಸಿದರು.
ಮೃತ ರೇಣುಕಾಸ್ವಾಮಿಯ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ನಿರಾಕರಿಸಲಾಗಿದೆ ಎಂದು ಆಕ್ಷೇಪಿಸಿ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಆರೋಪಿಗಳಾದ ದರ್ಶನ್, ಲಕ್ಷ್ಮಣ್ (ದರ್ಶನ್ ಕಾರಿನ ಡ್ರೈವರ್) ಹಾಗೂ ನಾಗರಾಜ್ (ದರ್ಶನ್ ಮ್ಯಾನೇಜರ್) ಪರ ಹಾಜರಾಗಿದ್ದ ವಕೀಲ ಎಸ್. ಸುನೀಲ್ ಕುಮಾರ್ ಅವರು, ಈ ಪ್ರಕರಣದಲ್ಲಿ ನಾನು ದರ್ಶನ್ ಮತ್ತಿತರ ವಕಾಲತ್ತಿನಿಂದ ನಿವೃತ್ತಿ ಪಡೆಯಲು ಬಯಸಿದ್ದೇನೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಪ್ರಾಸಿಕ್ಯೂಟರ್ ಪಿ. ಪ್ರಸನ್ನ ಕುಮಾರ್, ಇವರ ಈ ಹೇಳಿಕೆ ವಿಚಾರಣೆಯನ್ನು ವಿಳಂಬಿಸುವ ಸೂತ್ರವಾಗಿದೆ. ವಿಚಾರಣೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನವಿದೆ. ಈ ಆದೇಶವನ್ನು ದರ್ಶನ್ ಅವರೇ ಸುಪ್ರೀಂಕೋರ್ಟ್‌ಗೆ ಹೋಗಿ ಪಡೆದುಕೊಂಡು ಬಂದಿದ್ದಾರೆ. ಆದರೆ, ಈಗ ಪ್ರತಿಯೊಂದಕ್ಕೂ ತಕರಾರು ತೆಗೆದು ವಿಚಾರಣೆ ವಿಳಂಬಗೊಳಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಇದನ್ನು ಅಲ್ಲಗಳೆದ ಸುನೀಲ್ ಕುಮಾರ್, ವಿಚಾರಣೆ ಬೇಗ ಮುಗಿಸಿ ಎಂದು ನಾವು ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿರಲಿಲ್ಲ. ನಮ್ಮ ಕಕ್ಷಿದಾರರಿಗೆ ಜೈಲಿನಲ್ಲಿ ಮನೆ ಊಟ ನೀಡಲು ಮತ್ತು ಸೂಕ್ತವಾದ ಸೌಲಭ್ಯ ಒದಗಿಸಲು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಯುತ್ತಿಲ್ಲವಾದ ಕಾರಣ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದೆವು. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವಿಚಾರಣೆಗೆ ಕಾಲಮಿತಿ ನಿಗದಿಪಡಿಸಿದೆ ಎಂದು ಸಮಜಾಯಿಷಿ ನೀಡಿದರು.
ಕೆಲ ಹೊತ್ತು ಪ್ರಾಸಿಕ್ಯೂಷನ್ ಮತ್ತು ಆರೋಪಿ ಪರ ವಕೀಲರ ನಡುವೆ ವಾಕ್ಸಮರ ನಡೆಯಿತು. ಅಂತಿಮವಾಗಿ ಸುನೀಲ್ ಕುಮಾರ್, ಈ ಅರ್ಜಿಗೆ ಸಂಬಂಧಿಸಿದಂತೆ ಹಾಜರಾಗಲು ದರ್ಶನ್ ಮತ್ತು ಇತರ ಆರೋಪಿಗಳು ಜೈಲಿನಲ್ಲಿದ್ದು ನನಗೆ ಈತನಕ ಯಾವುದೇ ಸೂಚನೆ ಬಂದಿಲ್ಲ. ಅಷ್ಟಕ್ಕೂ, ಈ ಪ್ರಕರಣದಿಂದ ನಾನು ನಿವೃತ್ತಿ ಪಡೆಯಲು ಬಯಸಿದ್ದೇನೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಈ ದಿನ ಮೆರಿಟ್ ಮೇಲೆ ಯಾವುದೇ ವಿಚಾರಣೆ ನಡೆದಿಲ್ಲವಾದರೂ ಆರೋಪಿ ಪರ ವಕೀಲರು ತಾವು ಹೇಳಬೇಕಾದ್ದನ್ನು ಅಡಕಗೊಳಿಸಿಯೇ ವಿಚಾರಣೆ ಮುಂದೂಡುವಂತೆ ಕೋರಿದ್ದಾರೆ. ಆದ್ದರಿಂದ, ಅರ್ಜಿ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಪ್ರಾಸಿಕ್ಯೂಷನ್ ಆಕ್ಷೇಪವೇನು?
ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಕರೆಸಿದ್ದ ಸಾಕ್ಷಿಯು (ರತ್ನಪ್ರಭಾ) ನ್ಯಾಯಾಲಯದ ಮುಂದೆ ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಸಾಕ್ಷಿ ತನ್ನ ಹೇಳಿಕೆಯಿಂದ ಹಿಂದೆ ಸರಿದಾಗ, ನಮ್ಮ ಮನವಿಯ ಮೇರೆಗೆ ನ್ಯಾಯಾಲಯ ತನ್ನ ವಿವೇಚನೆ ಬಳಸಿ ಪಾಟಿ ಸವಾಲು ನಡೆಸಲು ಅನುಮತಿ ನೀಡಬೇಕಿತ್ತು. ಆದರೆ, ನಮ್ಮ ಮನವಿಯನ್ನು ಸೆಷನ್ಸ್ ನ್ಯಾಯಾಲಯ ತಳ್ಳಿ ಹಾಕಿದೆ ಎಂದು ಪ್ರಾಸಿಕ್ಯೂಷನ್ ಆಕ್ಷೇಪಿಸಿದೆ.
ಭಾರತೀಯ ಸಾಕ್ಷ್ಯ ಅಧಿನಿಯಮ–1872ರ ಕಲಂ 154ರ ಅನುಸಾರ ಪ್ರಾಸಿಕ್ಯೂಷನ್ ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸಲು ಅನುಮತಿ ನೀಡಬೇಕು. ಈ ದಿಸೆಯಲ್ಲಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್‌ನ 57ನೇ ನ್ಯಾಯಾಲಯ 2026ರ ಜನವರಿ 17ರಂದು ತಿರಸ್ಕರಿಸಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಅನುಮತಿ ನೀಡಿ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.


Comments (0)