ಡಿ.ಎನ್. ಜೀವರಾಜ್ ವಿರುದ್ಧದ ಮತ ತಿರುಚಿದ ಆರೋಪ; ಚುನಾವಣಾ ಆಯೋಗದ ಭದ್ರತೆ ಯೂಸ್‌ಲೆಸ್ ಎನ್ನುವಿರೇ? ದೂರುದಾರರಿಗೆ ಹೈಕೋರ್ಟ್ ಪ್ರಶ್ನೆ
- by Prashanth Basavapatna
- June 8, 2026
- 9 Views
ಬೆಂಗಳೂರು: ಚುನಾವಣಾ ಆಯೋಗದ ವಶದಲ್ಲಿದ್ದ ಮತಪತ್ರಗಳನ್ನು ಶೃಂಗೇರಿ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಹೇಗೆ ತಿದ್ದಲು ಸಾಧ್ಯ? ಹಾಗಾದರೆ, ಆಯೋಗದ ಭದ್ರತೆ ಪ್ರಯೋಜನಕ್ಕೆ ಬಾರದ್ದು (ಯೂಸ್ ಲೆಸ್) ಎನ್ನುತ್ತೀರಾ? ಎಂದು ದೂರುದಾರರನ್ನು ಹೈಕೋರ್ಟ್ ಮೌಖಿಕವಾಗಿ ಪ್ರಶ್ನಿಸಿದೆ.
ಅಂಚೆ ಮತಗಳ ಮರು ಎಣಿಕೆ ವೇಳೆ ಮತಪತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ನೀಡಿದ ದೂರು ಆಧರಿಸಿ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಡಿ.ಎನ್. ಜೀವರಾಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಆರೋಪಗಳೇನು ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ದೂರುದಾರರ ಪರ ವಕೀಲರು, ಮತಪತ್ರಗಳನ್ನು ತಿರುಚಲಾಗಿದೆ ಎಂದರು. ಮತದಾನದ ಬಳಿಕ ಮತಪತ್ರಗಳು ಯಾರ ವಶದಲ್ಲಿದ್ದವು ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ದೂರುದಾರರ ಪರ ವಕೀಲರು ಚುನಾವಣಾ ಆಯೋಗದ ವಶದಲ್ಲಿ ಎಂದರು.
ಅದಕ್ಕೆ ನ್ಯಾಯಪೀಠ, ಮತಪತ್ರಗಳು ಚುನಾವಣಾ ಆಯೋಗದ ವಶದಲ್ಲಿರಬೇಕಾದರೆ, ಅವುಗಳನ್ನ ಅರ್ಜಿದಾರರು ಹೇಗೆ ತಿದ್ದಲು ಸಾಧ್ಯ? ಚುನಾವಣಾ ಆಯೋಗ ಹಾಕಿದ್ದ ಬೀಗ ಒಡೆದು ಮತಗಳನ್ನು ತಿದ್ದುಪಡಿ ಮಾಡಿ ಬಂದರೇ? ಅಂದರೆ ಚುನಾವಣಾ ಆಯೋಗದ ಭದ್ರತೆ ಯೂಸ್ ಲೆಸ್ ಎನ್ನುತ್ತೀರಾ? ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು.
ಅಂತಿಮವಾಗಿ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್‌ಗೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಜುಲೈ 3ರವರೆಗೆ ವಿಸ್ತರಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)