ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ರದ್ದಾಗಲೇಬೇಕು- ಹೈಕೋರ್ಟ್ ಮೌಖಿಕ ಅಭಿಪ್ರಾಯ
- by Jagan Ramesh
- June 23, 2026
- 14 Views
ಬೆಂಗಳೂರು: ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಲಾಗುವುದು, ಸ್ವಾಮೀಜಿ ನಿಯಮಿತ ಜಾಮೀನು (ರೆಗ್ಯುಲರ್ ಬೇಲ್) ಪಡೆದುಕೊಳ್ಳಬಹುದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ 2026ರ ಮೇ 6ರಂದು ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿಯಲ್ಲಿ ಎರಡನೇ ಪ್ರತಿವಾದಿಯಾಗಿರುವ ಸ್ವಾಮೀಜಿ ಪರ ವಕೀಲರು, ಸ್ವಾಮೀಜಿ ಪರ ವಕಾಲತ್ತು ಹಾಕಲು ಹಾಗೂ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಈ ಹಂತದಲ್ಲಿ ನ್ಯಾಯಪೀಠ, ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ ವಚನಾನಂದ ಸ್ವಾಮೀಜಿ ನಿಯಮಿತ ಜಾಮೀನು ಪಡೆದುಕೊಳ್ಳಲಿ. ಆರೋಪ ಪಟ್ಟಿ ಸಲ್ಲಿಕೆಯಾದರೆ ನಿರೀಕ್ಷಣಾ ಜಾಮೀನು ರದ್ದಾಗಬೇಕೆಂದಿಲ್ಲ. ಆದರೆ, ಜಾಮೀನು ಮಂಜೂರು ಮಾಡಿರುವ ವಿಧಾನ ಸರಿಯಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿ, ನಿಯಮಿತ ಜಾಮೀನು ಪಡೆದುಕೊಳ್ಳಲು ಸ್ವಾತಂತ್ರ್ಯ ಕಲ್ಪಿಸಲಾಗುವುದು. ಎರಡು ವಾರಗಳವರೆಗೆ ಸ್ವಾಮೀಜಿ ಅವರನ್ನು ಬಂಧಿಸದಂತೆ ಆದೇಶಿಸಲಾಗುವುದು ಎಂದು ಹೇಳಿತು.
ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ವಚನಾನಂದ ಸ್ವಾಮೀಜಿಗೆ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದತಿಗೆ ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಸರ್ಕಾರ ಅರ್ಜಿ ಸಲ್ಲಿಸಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಯಾವ ಕಾರಣಕ್ಕೂ ಈ ನಿರೀಕ್ಷಣಾ ಜಾಮೀನು ಆದೇಶ ಹಾಗೇ ಉಳಿಯಲು ಸಾಧ್ಯವಿಲ್ಲ. ಈ ರೀತಿಯ ಜಾಮೀನು ಮಂಜೂರು ಮಾಡಲು ಅವಕಾಶವೇ ಇಲ್ಲ. ಅದು ರದ್ದಾಗಲೇಬೇಕಿದೆ, ಅದರಲ್ಲಿ ಎರಡು ಮಾತಿಲ್ಲ. ಆದರೆ, ಅರ್ಜಿದಾರರು ಈಗಾಗಲೇ ನಿರೀಕ್ಷಣಾ ಜಾಮೀನಿನ ಲಾಭ ಪಡೆದಿರುವುದರಿಂದ, 10-15 ದಿನಗಳ ಕಾಲಾವಕಾಶ ನೀಡಲಾಗುವುದು. ಅವರು ನಿಯಮಿತ ಜಾಮೀನು ಪಡೆದುಕೊಳ್ಳಲಿ ಎಂದು ಮೌಖಿಕವಾಗಿ ಹೇಳಿತು.
ಅಂತಿಮವಾಗಿ, ವಚನಾನಂದ ಸ್ವಾಮೀಜಿ ಪರ ವಕೀಲರ ಮನವಿಯ ಮೇರೆಗೆ ನ್ಯಾಯಪೀಠ ವಿಚಾರಣೆಯನ್ನು ಗುರುವಾರಕ್ಕೆ (ಜೂನ್ 25) ಮುಂದೂಡಿತು.
ಸ್ವಾಮೀಜಿ ವಿರುದ್ಧ ಮತ್ತೊಂದು ಎಫ್ಐಆರ್:
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರು, ಹೈಕೋರ್ಟ್ಗೆ ಈ ಅರ್ಜಿ ಸಲ್ಲಿಸಿದ ನಂತರ ಪ್ರಕರಣದ ದೂರುದಾರೆಯೂ ಆಗಿರುವ ಅರ್ಜಿದಾರೆಗೆ ಸ್ವಾಮೀಜಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಆಕೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮತ್ತೊಂದು ಎಫ್ಐಆರ್ ಹಾಕಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಬಾಲಕರೂ ಸುರಕ್ಷಿತವಾಗಿಲ್ಲವೇ?
ವಚನಾನಂದ ಸ್ವಾಮೀಜಿ ಪರ ವಕೀಲರು, ಮಠದ ಟ್ರಸ್ಟಿಗಳು ಹಾಗೂ ಸ್ವಾಮೀಜಿ ನಡುವೆ ವ್ಯಾಜ್ಯವಿದೆ. ಟ್ರಸ್ಟಿಗಳು ಸ್ವಾಮೀಜಿ ಅವರನ್ನು ಮಠದಿಂದ ಹೊರ ಹಾಕಿದ್ದಾರೆ. ಆ ನಂತರ ಸುದ್ದಿಗೋಷ್ಠಿ ನಡೆಸಿ, ಸ್ವಾಮೀಜಿ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದರು.
ಈ ಹಂತದಲ್ಲಿ ನ್ಯಾಯಪೀಠ, ಅಪ್ರಾಪ್ತ ಬಾಲಕಿಯರು ಸುರಕ್ಷಿತವಾಗಿಲ್ಲ ಎಂದುಕೊಂಡರೆ, ಅಪ್ರಾಪ್ತ ಬಾಲಕರೂ ಸುರಕ್ಷಿತವಾಗಿಲ್ಲವೇ ಎಂದು ಪ್ರಶ್ನಿಸಿತು. ಅದಕ್ಕೆ ಸ್ವಾಮೀಜಿ ಪರ ವಕೀಲರು, ಇದೊಂದು ಸುಳ್ಳು ದೂರಾಗಿದೆ. ಇದನ್ನು ಸಾಬೀತುಪಡಿಸಲು ಕೆಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು. ನ್ಯಾಯಾಲಯ ಅದನ್ನು ಪರಿಶೀಲಿಸಬಹುದು ಎಂದರು.
ಪ್ರಕರಣವೇನು?
ಸಂತ್ರಸ್ತ ಬಾಲಕನ ತಾಯಿ 2026ರ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪೋಕ್ಸೊ ಕಾಯ್ದೆ ಸೆಕ್ಷನ್ಗಳಾದ 8 ಮತ್ತು 12 ಹಾಗೂ ಐಪಿಸಿ ಸೆಕ್ಷನ್ಗಳಾದ 323 ಮತ್ತು 506ರ ಅಡಿ ಜೀರೋ ಎಫ್ಐಆರ್ ದಾಖಲಿಸಿದ್ದರು. ಕೃತ್ಯ ಹರಿಹರದಲ್ಲಿ ನಡೆದಿದ್ದರಿಂದ ದೂರನ್ನು ಅಲ್ಲಿನ ಠಾಣೆಗೆ ವರ್ಗಾಯಿಸಲಾಗಿತ್ತು. ದೂರು ಆಧರಿಸಿ ಹರಿಹರ ಗ್ರಾಮಾಂತರ ಪೊಲೀಸರು ಮೇ 8ರಂದು ಪ್ರಕರಣ ದಾಖಲಿಸಿದ್ದರು.
ಸಂತ್ರಸ್ತ ಬಾಲಕನ ತಾಯಿ ನೀಡಿದ್ದ ದೂರಿನಲ್ಲಿ, 2021-2024ರ ಅವಧಿಯಲ್ಲಿ ಮಠದಲ್ಲಿ ಮಕ್ಕಳು ಶಾಲೆಗೆ ಹೋಗುವ ಮುನ್ನ ಮಠದ ಸ್ನಾನ ಗೃಹದಲ್ಲಿ ಮಕ್ಕಳ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ, ಸ್ವಾಮೀಜಿ ತಾವು ಸಹ ಬೆತ್ತಲೆಯಾಗಿ ಮಕ್ಕಳಿಂದ ತಮ್ಮ ದೇಹದ ಖಾಸಗಿ ಭಾಗ ಮಸಾಜ್ ಮಾಡಿಸಿಕೊಳ್ಳುವುದು ಹಾಗೂ ಮಕ್ಕಳ ಖಾಸಗಿ ಅಂಗಗಳನ್ನು ತಾವು ಮುಟ್ಟುತ್ತಾ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಕ್ಕಳು ಪ್ರತಿರೋಧ ಮಾಡಿದಾಗ ಅವರಿಗೆ ಹೊಡೆದಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ, ಊಟ ನೀಡದೇ ಸತಾಯಿಸಿದ್ದಾರೆ ಎಂದು ಆರೋಪಿಸಿದ್ದರು. ಕೊನೆಯದಾಗಿ ದೂರುದಾರರ ಮಗ ಹಾಗೂ ಇತರರ ಮೇಲೆ 2024ರ ಮಾರ್ಚ್ 20ರಂದು ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
Related Articles
Thank you for your comment. It is awaiting moderation.


Comments (0)