ಎಸ್‌ಸಿ-ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಳ; ಜುಲೈ 15ಕ್ಕೆ ಅರ್ಜಿಗಳ ಅಂತಿಮ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ. 56ಕ್ಕೆ ಹೆಚ್ಚಳ ಮಾಡಿರುವ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್‌ ಜುಲೈ 15ಕ್ಕೆ ನಿಗದಿಪಡಿಸಿದೆ.

ಇದರಿಂದಾಗಿ, ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ 56 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಮೀಸಲು ಅಧಿಸೂಚನೆ ರದ್ದು ಕೋರಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್‌ ಮಿತ್ರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, 2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕಾಯ್ದೆ ರದ್ದುಗೊಳಿಸಿದ್ದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಹ ರಿಟ್ ಅರ್ಜಿ ಸಲ್ಲಿಸಿದೆ. ಇದಲ್ಲದೆ, ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಡಗಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022’ರ ಸಿಂಧುತ್ವ ಪ್ರಶ್ನಿಸಿ ಹಲವು ರಿಟ್ ಅರ್ಜಿಗಳು ಸಲ್ಲಿಕೆಯಾಗಿವೆ.

ಈ ಎಲ್ಲ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ನಿಗದಿಯಾಗಿತ್ತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಅರ್ಜಿಗಳ ಸಂಬಂಧ ಲಿಖಿತ ವಾದಾಂಶ ಸಲ್ಲಿಸಲಾಗಿದೆ. ಮುಂದಿನ ವಾರ ಯಾವುದೇ ದಿನ ಅರ್ಜಿಗಳನ್ನು ವಿಚಾರಣೆಗೆ ನಿಗದಿ ಮಾಡಬಹುದು ಎಂದರು. ಅದಕ್ಕೆ ನ್ಯಾಯಪೀಠ, ಕಳೆದ ವಿಚಾರಣೆ ವೇಳೆ ಸರ್ಕಾರ ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡಿಕೆಗೆ ಮನವಿ ಮಾಡುವುದಿಲ್ಲ ಎಂದು ಹೇಳಿತ್ತಲ್ಲ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಪಿ.ಎಸ್‌. ರಾಜಗೋಪಾಲ್‌ ಅವರು, ಮೀಸಲು ಹೆಚ್ಚಳಕ್ಕೆ ರಾಷ್ಟ್ರೀಯ ಆಯೋಗದೊಂದಿಗೆ ಚರ್ಚೆ ಮಾಡಿಲ್ಲವೆಂಬ ಕಾರಣಕ್ಕೆ ನ್ಯಾಯಾಲಯ ನೇಮಕಾತಿಗೆ ತಡೆ ನೀಡಿದೆ. ರಾಷ್ಟ್ರೀಯ ಆಯೋಗದೊಂದಿಗೆ ಸಮಾಲೋಚನೆ ಕಡ್ಡಾಯವಾಗಿದೆ. ಇಲ್ಲಿ ಪ್ರಮುಖ ಪ್ರಶ್ನೆ ಎಂದರೆ, ಶೇ.50 ಮೀಸಲು ಮೀರುವಂತಹ ವಿಶೇಷ ಸಂದರ್ಭಗಳು ಏನಿದ್ದವು ಎಂಬುದಾಗಿದೆ. ರಾಜ್ಯ ಸರ್ಕಾರ ನ್ಯಾಯಮೂರ್ತಿಗಳಾದ ಎಚ್‌.ಎನ್‌. ನಾಗಮೋಹನ್‌ ದಾಸ್‌ ಹಾಗೂ ಸುಭಾಷ್‌ ಅಡಿ ನೇತೃತ್ವದ ವಿಚಾರಣಾ ಆಯೋಗಗಳ ನೇತೃತ್ವದ ವರದಿಗಳನ್ನು ಆಧರಿಸಿದೆ. ಆದ್ದರಿಂದ, ಇದು ಅತ್ಯಂತ ಪ್ರಮುಖ ವಿಚಾರವಾಗಿದ್ದು, ಆ ಬಗ್ಗೆ ವಿಸ್ತೃತ ವಿಚಾರ ನಡೆಸಬೇಕಿದೆ ಎಂದರು.

ಆಗ ನ್ಯಾಯಪೀಠ, ಬಾಕಿ ಇರುವ ಅರ್ಜಿಗಳನ್ನು ಆದಷ್ಟು ಬೇಗ ಪರಿಗಣಿಸಿ, ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದ್ದರಿಂದ, ಅಡ್ವೊಕೇಟ್ ಜನರಲ್ ಮನವಿ ಮೇರೆಗೆ ಅಂತಿಮ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸುವುದಾಗಿ ಆದೇಶಿಸಿತು.

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆಗಿಲ್ಲ ಅನುಮತಿ:
ಈ ಮಧ್ಯೆ ಕೆಪಿಎಸ್‌ಸಿ ಪರ ಹಾಜರಾದ ಎಎಜಿ ರೋಬೆನ್‌ ಜಾಕೋಬ್‌ ಅವರು, 2023-2024ನೇ ಸಾಲಿನ 384 ಕೆಎಎಸ್‌ ಅಧಿಕಾರಿಗಳ ನೇಮಕ ಸಂಬಂಧ ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ನ್ಯಾಯಾಲಯ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿರುವುದರಿಂದ ತೊಂದರೆ ಆಗುತ್ತಿದೆ. ಆದ್ದರಿಂದ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲು ಅನುಮತಿ ನೀಡಬೇಕು ಎಂದು ಕೋರಿದರು.

ಇದನ್ನೊಪ್ಪದ ನ್ಯಾಯಪೀಠ, ಎಲ್ಲ ಅರ್ಜಿಗಳ ವಿಚಾರಣೆ ನಡೆಸಲು ನ್ಯಾಯಾಲಯ ಸಿದ್ಧವಿದೆ. ಸರ್ಕಾರ ಸಿದ್ಧವೆಂದರೆ ಇಂದಿನಿಂದಲೇ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿತು. ಅಂತಿಮವಾಗಿ, ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದ ನ್ಯಾಯಪೀಠ, ಅಂದಿನಿಂದ ಅಂತಿಮ ವಿಚಾರಣೆ ಕೈಗೊಳ್ಳಲಾಗುವುದು, ಎಲ್ಲರೂ ವಾದ-ಪ್ರತಿವಾದಕ್ಕೆ ಸಿದ್ಧರಾಗಿ ಬರಬೇಕು ಎಂದು ಹೇಳಿತು.

Related Articles

Comments (0)

Leave a Comment