ಜಾತ್ಯತೀತತೆ ಎಂದರೆ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ಹೊರಗಿಡುವುದಲ್ಲ; ಹೈಕೋರ್ಟ್

ಬೆಂಗಳೂರು: ನಗರದ ವೈಯಾಲಿಕಾವಲ್‌ನ ಸ್ಯಾಂಕಿ ಪಾರ್ಕ್‌ನ ಯೋಗ ಸಭಾಂಗಣದಲ್ಲಿ ಶಂಕರ ಜಯಂತಿ ಆಚರಣೆಗೆ ಅನುಮತಿ ನಿರಾಕರಿಸಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಜಾತ್ಯತೀತತೆ ಎಂದರೆ ಧಾರ್ಮಿಕ ಚಟುವಟಿಕೆಯನ್ನು ಹೊರಗಿಡುವುದಲ್ಲ ಎಂದು ಅಭಿಪ್ರಾಯಪಟ್ಟಿದೆ.

ಶಂಕರ ಜಯಂತಿ ಆಚರಣೆಗೆ ಅನುಮತಿ ನಿರಾಕರಿಸಿದ್ದ ಪಶ್ಚಿಮ ನಗರ ಪಾಲಿಕೆ ಕ್ರಮವನ್ನು ಪ್ರಶ್ನಿಸಿ ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್‌ನ ಕಾರ್ಯದರ್ಶಿ ಕೌಶಿಕ್‌ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಶಂಕರಾಚಾರ್ಯರು ಭಾರತದ ಅತ್ಯಂತ ಗೌರವಾನ್ವಿತ ಆಚಾರ್ಯರಲ್ಲಿ ಒಬ್ಬರು. ಅವರು ಪ್ರಚಾರ ಮಾಡಿದ ಅದ್ವೈತ ತತ್ವಶಾಸ್ತ್ರವು ದೇಶದ ಪ್ರಮುಖ ತಾತ್ವಿಕ ಸಂಪ್ರದಾಯಗಳಲ್ಲಿ ಒಂದಾಗಿದೆ. ಶಂಕರಾಚಾರ್ಯ ಜಯಂತಿ ಆಚರಣೆಯನ್ನು ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಎರಡೂ ರೀತಿಯಲ್ಲಿ ಪರಿಗಣಿಸಬೇಕಾಗಿದೆ. ಭಾರತ ಜಾತ್ಯತೀತ ದೇಶವಾಗಿದೆ. ಅದಾಗ್ಯೂ ದೇಶದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಆಚರಿಸಲಾಗುವುದಿಲ್ಲವೆಂದು ಅದರ ಅರ್ಥವಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಭಾರತೀಯ ನಾಗರಿಕತೆಯ ಶ್ರೇಷ್ಠತೆಯು ಅದರ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಬೆಸೆದುಕೊಂಡಿದೆ. ಅದನ್ನು ತೆಗೆದುಹಾಕುವುದು ದೇಶದಿಂದ ಆತ್ಮವನ್ನು ತೆಗೆದುಹಾಕುವುದಕ್ಕೆ ಸಮಾನವಾಗಿದೆ. ಭಾರತದ ಸಂವಿಧಾನವು ಭಾರತೀಯ ನಾಗರಿಕತೆಯ ಮುದ್ರೆಗಳು, ಅವು ಭಾರತೀಯ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾದ ಗುರುಕುಲ, ರಾಮಾಯಣ, ಭಗವದ್ಗೀತೆ, ಗೌತಮ ಬುದ್ಧ, ಮಹಾವೀರ ಸ್ವಾಮಿ ಮತ್ತಿತರವುಗಳನ್ನು ಒಳಗೊಂಡಿದೆ. ಆದ್ದರಿಂದ, ಧರ್ಮದೊಂದಿಗೆ ಅಂತರ್ಗತವಾಗಿ ಬೆಸೆದುಕೊಂಡಿರುವ ಭಾರತೀಯ ಸಂಸ್ಕೃತಿಯ ಆಚರಣೆಯನ್ನು ಎಂದಿಗೂ ಕಾನೂನುಬಾಹಿರ ಅಥವಾ ಸಂವಿಧಾನಬಾಹಿರವೆಂದು ಪರಿಗಣಿಸಲಾಗದು. ವಾಸ್ತವವಾಗಿ ಅದರಲ್ಲಿರುವ ಒಳ್ಳೆಯತನವನ್ನು ಸಮಾಜದ ಸುಧಾರಣೆಗಾಗಿ ಸಕ್ರಿಯವಾಗಿ ಉತ್ತೇಜಿಸಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಈ ಹಿನ್ನೆಲೆಯಲ್ಲಿ ಶಂಕರ ಜಯಂತಿಗೆ ಅನುಮತಿ ನೀಡದೆ ಪಶ್ಚಿಮ ಪಾಲಿಕೆ ಹಿಂಬರಹ ನೀಡಿರುವುದಕ್ಕೆ ಯಾವುದೇ ಆಧಾರವಿಲ್ಲ. ಆ ರೀತಿ ಧಾರ್ಮಿಕ ಜಯಂತಿ ನಿಷೇಧಕ್ಕೆ ಸರ್ಕಾರಿ ನೀತಿಯೂ ಇಲ್ಲ. ಆದ್ದರಿಂದ, ಪಾಲಿಕೆಯ ಆದೇಶವು ಏಕಪಕ್ಷೀಯ ಹಾಗೂ ಸಕಾರಣವಿಲ್ಲದ್ದೆಂದು ಭಾವಿಸಿ, ಅದನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?
ಬೆಂಗಳೂರಿನ ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್‌ ಏಪ್ರಿಲ್ 21ರಂದು ಸ್ಯಾಂಕಿ ಕೆರೆಯ ಆವರಣದ ಯೋಗ ಸಭಾಂಗಣದಲ್ಲಿ ಶಂಕರ ಜಯಂತಿ ಆಚರಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಗೆ ಅನುಮತಿ ಕೋರಿದ್ದರು. ಆದರೆ, ಸಭಾಂಗಣದಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ಅನುಮತಿ ನೀಡಲಾಗದು ಎಂದು ಪಶ್ಚಿಮ ಪಾಲಿಕೆ ಹಿಂಬರಹ ನೀಡಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದ ಟ್ರಸ್ಟ್‌, ಸಭಾಂಗಣದಲ್ಲಿ ಧಾರ್ಮಿಕ ಚಟುವಟಿಕೆ ನಿರ್ಬಂಧಿಸಲು ಯಾವುದೇ ನಿಯಮ ಹಾಗೂ ನಿಬಂಧನೆಗಳಿಲ್ಲ. ಆದರೂ, ಸಹ ಏಕಪಕ್ಷೀಯವಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಆಕ್ಷೇಪಿಸಿತ್ತು.

Related Articles

Comments (0)

Leave a Comment