ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮುಡಾ ಸಲ್ಲಿಸಿದ್ದ ಮೇಲ್ಮನವಿ ವಜಾ
- by Prashanth Basavapatna
- April 22, 2026
- 9 Views
ಬೆಂಗಳೂರು: ಭೂಸ್ವಾಧೀನ ಪ್ರಕ್ರಿಯೆ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ 460 ದಿನಗಳಿಗೂ ಅಧಿಕ ಸಮಯ ವಿಳಂಬ ಮಾಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಶಾಸನಬದ್ಧ ಪ್ರಾಧಿಕಾರವೊಂದು ಸಾಕಷ್ಟು ವಿಳಂಬವಾಗಿ ಮೇಲ್ಮನವಿ ಸಲ್ಲಿಸಿದೆ ಎಂಬ ಒಂದೇ ಕಾರಣಕ್ಕೆ ಕಾನೂನು ಮಿತಿಗಳನ್ನು ಮೀರಿ ಕಾರ್ಯನಿರ್ವಹಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತಿತರರಿಗೆ ಸೇರಿದ್ದ ಜಮೀನಿನ ಸ್ವಾಧೀನಕ್ಕಾಗಿ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿಮ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮುಡಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ವಜಾಗೊಳಿಸಿದೆ.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸುಮಾರು 460ಕ್ಕೂ ಅಧಿಕ ದಿನಗಳ ವಿಳಂಬದ ಬಳಿಕ ಮುಡಾ ಮೇಲ್ಮನವಿ ಸಲ್ಲಿಸಿದೆ. ವಿಳಂಬಕ್ಕೆ ನೀಡಲಾಗಿರುವ ಕಾರಣಗಳು ಅಸ್ಪಷ್ಟವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ದಾವೆಗಳಿಗೆ ಒಂದು ಅಂತಿಮ ರೂಪ ನೀಡುವುದು ‘ಕಾನೂನು ಮಿತಿಗಳ ಕಾಯ್ದೆ’ಯ (Limitation Act) ಉದ್ದೇಶವಾಗಿದೆ. ಅಧಿಕಾರಿಗಳ ವಿಳಂಬ ಮತ್ತು ನಿರ್ಲಕ್ಷ್ಯದ ಧೋರಣೆಯನ್ನು ನ್ಯಾಯಾಲಯ ಒಪ್ಪಲು ಸಾಧ್ಯವಿಲ್ಲ. ಸೂಕ್ತ ಕಾರಣಗಳಿಲ್ಲದೆ ಇಂತಹ ವಿಳಂಬವನ್ನು ಪುರಸ್ಕರಿಸುವುದು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮೇಲ್ಮನವಿ ಸಲ್ಲಿಕೆಯ ವಿಳಂಬಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತರು ಸಲ್ಲಿಸಿರುವ ಪ್ರಮಾಣಪತ್ರ ಅತ್ಯಂತ ಅಸ್ಪಷ್ಟವಾಗಿದೆ. ಈ ವಿಳಂಬವನ್ನು ಪರಿಗಣಿಸುವುದಕ್ಕೆ ಸೂಕ್ತ ವಿವರಣೆಯನ್ನು ನೀಡಿಲ್ಲ. ಇಂತಹ ವಿಳಂಬವನ್ನು ಪರಿಗಣಿಸಿದಲ್ಲಿ ಸತ್ತಂತಿರುವ ಮುಡಾದ ಹಕ್ಕನ್ನು ಮತ್ತೆ ಉಳಿಸಿದಂತಾಗಲಿದ್ದು, ತಮ್ಮ ಹಕ್ಕುಗಳ ಬಗ್ಗೆ ಶ್ರದ್ಧ ಇಲ್ಲದವರ ಪರ ಆದೇಶ ನೀಡಿದಂತಾಗಲಿದೆ. ಲಿಮಿಟೇಷನ್ ಕಾಯ್ದೆಯ ಉದ್ದೇಶ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿ ನಡೆದಂತಾಗಲಿದ್ದು, ಪ್ರತಿವಾದಿಗಳಿಗೆ ದೊಡ್ಡ ಅನ್ಯಾಯವನ್ನುಂಟು ಮಾಡಿದಂತಾಗಲಿದೆ ಎಂದು ನ್ಯಾಯಪೀಠ ಹೇಳಿದೆ.
ಮುಡಾ ಆಯುಕ್ತರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಮಂಜಸ ವಿವರಣೆ ಇಲ್ಲವಾಗಿದ್ದು, ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವದಿಂದ ವಿಳಂಬಕ್ಕೆ ಕಾರಣವಾಗಿದೆ ಎಂಬ ಅಂಶ ಗೊತ್ತಾಗಲಿದೆ ಎಂದಿರುವ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?
ಮೈಸೂರಿನ ಆಲನಹಳ್ಳಿ ಗ್ರಾಮದಲ್ಲಿ ಆಲನಹಳ್ಳಿ 2ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಮತ್ತಿತರರಿಗೆ ಸೇರಿದ್ದ ವಿವಿಧ ಸರ್ವೇ ನಂಬರ್ಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಡಾ 1992ರ ಜೂನ್ 25ರಂದು ಪ್ರಾಥಮಿಕ ಮತ್ತು 1996ರ ಮಾರ್ಚ್ 18ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಭೂಮಾಲೀಕರಾದ ಡಾ. ವೀರೇಂದ್ರ ಹೆಗ್ಗಡೆ ಮತ್ತು ಸಿ. ನಾಗರಾಜು ಎಂಬುವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಗಳನ್ನು 2022ರ ಆಗಸ್ಟ್ 1ರಂದು ರದ್ದುಪಡಿಸಿ, ಭೂಮಾಲೀಕರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮುಡಾ 2023ರ ಡಿಸೆಂಬರ್ 11ರಂದು ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
Related Articles
Thank you for your comment. It is awaiting moderation.



Comments (0)