ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು; ವಿಸ್ತೃತ ವರದಿ ಸಲ್ಲಿಸಲು ಅಮೈಕಸ್ ಕ್ಯೂರಿಗೆ ಹೈಕೋರ್ಟ್ ನಿರ್ದೇಶನ
- by LegalSamachar
- February 6, 2026
- 164 Views
ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿನ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ ಹಾಗೂ ಸಂತ್ರಸ್ತರಿಗೆ ಕಲ್ಪಿಸಲಾಗಿರುವ ಪುನರ್ವಸತಿ ವ್ಯವಸ್ಥೆ ಕುರಿತ ಮಾಹಿತಿ ಒಳಗೊಂಡ ವಿವರವಾದ ವರದಿ ಸಲ್ಲಿಸುವಂತೆ ಪ್ರಕರಣದ ಅಮೈಕಸ್ ಕ್ಯೂರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಅಕ್ರಮವಾಗಿ ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಅಮೈಕಸ್ ಕ್ಯೂರಿ ಬಿ.ವಿ. ವಿದ್ಯುಲ್ಲತಾ ಅವರನ್ನು ಕುರಿತು, ಮನೆಗಳ ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ. ಎಷ್ಟು ಜನರ ಮನೆ ತೆರವು ಮಾಡಲಾಗಿದೆ. ಎಷ್ಟು ಗುಡಿಸಲುಗಳನ್ನು ನಾಶಪಡಿಸಲಾಗಿದೆ. ಎಷ್ಟು ಕುಟುಂಬಗಳು ನಿರ್ಗತಿಕವಾಗಿವೆ. ಪುನರ್ವಸತಿಯ ವ್ಯವಸ್ಥೆ ಹೇಗಿದೆ ಎಂಬ ಅಂಶಗಳನ್ನೊಳಗೊಂಡ ವಿವರವಾದ ವರದಿ ಸಲ್ಲಿಸಬೇಕು ಎಂದು ಸೂಚಿಸಿತಲ್ಲದೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್ಎಲ್ಎಸ್ಎ) ಅಮೈಕಸ್ ಕ್ಯೂರಿ ಅವರಿಗೆ ಸಂಪೂರ್ಣ ನೆರವು ನೀಡಬೇಕು ಎಂದು ಆದೇಶಿಸಿತು.
ಮತ್ತೊಂದು ಅರ್ಜಿಯಲ್ಲಿ ಸರ್ಕಾರಕ್ಕೆ ನೋಟಿಸ್:
ಫಕೀರ್ ಕಾಲನಿಯಲ್ಲಿ 1990ರಿಂದ ನೆಲೆಸಿರುವ 15 ಮಂದಿಯ ನಿವಾಸಗಳನ್ನು ತೆರವು ಮಾಡಲಾಗಿರುವುದನ್ನು ಆಕ್ಷೇಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರತ್ಯೇಕ ನೋಟಿಸ್ ಜಾರಿಗೊಳಿಸಿದೆ.
ಕೋಗಿಲು ಬಡಾವಣೆಯ ರಬಿಯಾ, ಮೊಹಮ್ಮದ್ ರಫೀಕ್ ಸೇರಿದಂತೆ 15 ಮಂದಿ ಸಲ್ಲಿಸಿರುವ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೊ ವಾದ ಮಂಡಿಸಿ, ಅರ್ಜಿದಾರರು ಫಕೀರ್ ಕಾಲನಿಯಲ್ಲಿ 1990ರಿಂದ ನೆಲೆಸಿದ್ದಾರೆ. ಎಲ್ಲರಿಗೂ ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿಸಿ ಅನುಸಾರ ಹಕ್ಕು ಪತ್ರ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಗೂಗಲ್ ಅರ್ಥ್ ದಾಖಲೆ ಇದೆ. ಸರ್ಕಾರದ ದಾಖಲೆಯೇ ಇದೆ. ಅದಾಗ್ಯೂ, ಮನೆಗಳನ್ನು ತೆರವು ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಜತೆಗೆ, ಈ ಪ್ರಕರಣದಲ್ಲೂ ನೆರವು ನೀಡುವಂತೆ ಅಮೈಕಸ್ ಕ್ಯೂರಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)