ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ; ದಿನೇಶ್ ಗುಂಡೂರಾವ್‌ಗೆ ನೋಟಿಸ್ ಜಾರಿ ಮಾಡದ ಪೊಲೀಸರ ನಡೆಗೆ ಹೈಕೋರ್ಟ್ ಕಿಡಿ
- by Prashanth Basavapatna
- August 8, 2026
- 8 Views
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಅದರ ಸದಸ್ಯರ ಬಗ್ಗೆ ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪದಲ್ಲಿ ದಾಖಲಾಗಿರುವ ಖಾಸಗಿ ದೂರಿನಿಂದ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟಿರುವ ಕ್ರಮ ಪ್ರಶ್ನಿಸಿದ ಅರ್ಜಿ ಸಂಬಂಧ ದಿನೇಶ್ ಗುಂಡೂರಾವ್‌ಗೆ ಮೂರು ವಾರ ಕಳೆದರೂ ನೋಟಿಸ್ ನೀಡದ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ದಿನೇಶ್ ಗುಂಡೂರಾವ್ ಅವರ ಹೆಸರು ಕೈಬಿಟ್ಟಿರುವ ಮ್ಯಾಜಿಸ್ಪ್ರೇಟ್ ಆದೇಶ ಪ್ರಶ್ನಿಸಿ ಆರ್‌ಎಸ್‌ಎಸ್ ಬೆಂಬಲಿಗ ಬೆಂಗಳೂರಿನ ಜಯನಗರದ ನಿವಾಸಿ ಎ. ತೇಜಸ್ ಎಂಬುವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹೈಕೋರ್ಟ್ ಕಟ್ಟಡದ ಮುಂಭಾಗದಲ್ಲೇ ಇರುವ ಕಲ್ಲು ಕಟ್ಟಡದಲ್ಲಿರುವವರಿಗೆ ನೋಟಿಸ್ ತಲುಪಿಸುವುದು ಪೊಲೀಸರಿಗೆ ಸಾಧ್ಯವಿಲ್ಲವೇ, ಇದು ನಿಜಕ್ಕೂ ಆಘಾತಕಾರಿ ಎಂದು ತೀಕ್ಷ್ಣವಾಗಿ ನುಡಿಯಿತು.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು, ನ್ಯಾಯಾಲಯ ನೋಟಿಸ್ ಜಾರಿಗೊಳಿಸಿ ಮೂರು ವಾರ ಕಳೆದಿದೆ. ಆದರೆ, ಇನ್ನೂ ಪ್ರತಿವಾದಿ ದಿನೇಶ್ ಗುಂಡೂರಾವ್‌ಗೆ ನೋಟಿಸ್ ಜಾರಿಯಾಗಿಲ್ಲ ಎಂದರು. ಆಗ ಸರ್ಕಾರದ ಪರ ವಕೀಲರು, ಇನ್ನೂ ಪೊಲೀಸರಿಂದ ಪ್ರತಿವಾದಿಗೆ ನೋಟಿಸ್ ಜಾರಿಯಾಗಿರುವ ಬಗ್ಗೆ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.
ಅದಕ್ಕೆ ಆಘಾತ ವ್ಯಕ್ತಪಡಿಸಿದ ನ್ಯಾಯಪೀಠ, ಏನು? ಇನ್ನೂ ಕೋರ್ಟ್ ನೋಟಿಸ್ ಜಾರಿಯಾಗಿಲ್ಲವೇ? ದಿನೇಶ್ ಗುಂಡೂರಾವ್ ಅವರು ನೋಟಿಸ್ ಜಾರಿಗೆ ಸಿಕ್ಕಿಲ್ಲವೇ? ಶಾಸಕರು ಹಾಗೂ ಸಚಿವರು ಎಲ್ಲಿದ್ದಾರೆಂಬುದು ಪೊಲೀಸರಿಗೆ ತಿಳಿದಿದೆ. ಆದರೂ ಅವರಿಗೆ ನೋಟಿಸ್ ಜಾರಿಯಾಗಿಲ್ಲ ಎಂದರೆ ಏನರ್ಥ ಎಂದು ಮೌಖಿಕವಾಗಿ ಪ್ರಶ್ನಿಸಿತಲ್ಲದೆ, ಕೂಡಲೇ ನೋಟಿಸ್ ತಲುಪಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು.
ಪ್ರಕರಣವೇನು?
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದಿನೇಶ್ ಗುಂಡೂರಾವ್ ಇನ್ನಿತರರು ಸಾಮಾಜಿಕ ಮಾಧ್ಯಮಗಳು, ಸಾರ್ವಜನಿಕ ಹೇಳಿಕೆಗಳು ಹಾಗೂ ಸಂದರ್ಶನಗಳಲ್ಲಿ ಆರ್‌ಎಸ್ಎಸ್ ಹಾಗೂ ಅದರ ಸದಸ್ಯರ ಕುರಿತು ಮಾನಹಾನಿಕಾರಕ ಆರೋಪಗಳನ್ನು ಮಾಡಿದ್ದರು. ಅದಕ್ಕೆ ತೇಜಸ್ ಅವರು ಮೂವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ದೂರುದಾರರ ಹೇಳಿಕೆ ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ, ಮೂವರು ಆರೋಪಿತರಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಇಬ್ಬರ ವಿರುದ್ಧದ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ವಿಚಾರಣಾ ನ್ಯಾಯಾಲಯ, ದಿನೇಶ್ ಗುಂಡೂರಾವ್ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ಕೈಬಿಟ್ಟು 2026ರ ಜೂನ್ 26ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತೇಜಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.


Comments (0)