ಪ್ರಾಣಿಗಳ ಚಿಕಿತ್ಸೆಗೆ ಸುರಕ್ಷತಾ ಎಸ್ಒಪಿ ಸಿದ್ಧಪಡಿಸಲು ಸಮಿತಿ ರಚನೆ; ಹೈಕೋರ್ಟ್‌ಗೆ ಮೃಗಾಲಯ ಪ್ರಾಧಿಕಾರದ ಮಾಹಿತಿ

ಬೆಂಗಳೂರು: ಪ್ರಾಣಿಗಳ ಚಿಕಿತ್ಸೆ ಅಥವಾ ಆರೈಕೆಯ ಉದ್ದೇಶದಿಂದ ಮೃಗಾಯಲಯ ಪ್ರವೇಶಿಸಿ ಅವುಗಳ ಸನಿಹಕ್ಕೆ ಹೋಗುವಾಗ ಪಶುವೈದ್ಯರು, ಪಶುಪಾಲನಾ ಸಿಬ್ಬಂದಿ, ಮೃಗಾಲಯ ಪಾಲಕರು ಹಾಗೂ ಇತರ ಸಿಬ್ಬಂದಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಅಗತ್ಯ ಪ್ರಮಾಣಿತ ಕಾರ್ಯ ವಿಧಾನ (ಎಸ್ಒಪಿ) ಸೂಚಿಸಲು ತಜ್ಜರ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರ ಹೈಕೋರ್ಟ್ ಮಾಹಿತಿ ನೀಡಿದೆ.

ಇಂಗ್ಲೆಂಡ್‌ನಲ್ಲಿ ಎಂಸ್ಸಿ ಅನಯ್ವಿಕ ವನ್ಯಜೀವಿ ಸಂರಕ್ಷಣೆ ವ್ಯಾಸಂಗದಲ್ಲಿ ತೊಡಗಿ ಸದ್ಯ ಅಲ್ಲಿಯೇ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ 24 ವರ್ಷದ ಎಂ. ಭುವನ್ ಎಂಬುವರು ತಮ್ಮ ತಾಯಿ ಬಿ. ಪುಷ್ಪಲತಾ ಮೂಲಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೇಂದ್ರ ಮೃಗಾಲಯ ಪ್ರಾಧಿಕಾರದ ಪರ ವಕೀಲರು ಹಾಜರಾಗಿ, ಇತ್ತಿಚಿಗೆ ಶಿವಮೊಗ್ಗ ಮೃಗಾಲಯದಲ್ಲಿ ಚಿಕಿತ್ಸೆಗೆ ತೆರಳಿದ್ದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ನಿರಾನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳಿಗೆ ಸಂಬಂಧಿಸಿದಂತೆ ಅಗತ್ಯ ಎಸ್ಒಪಿ ಹಾಗೂ ಇತರ ಸುರಕ್ಷತಾ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಲು ಸಮಿತಿ ರಚಿಸಲಾಗಿದ್ದು, ಆ ನಿಟ್ಟಿನಲ್ಲಿ ಸಮಿತಿ ಕಾರ್ಯೋನ್ಮುಖವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರು ಎತ್ತಿರುವ ವಿಚಾರಗಳ ಬಗ್ಗೆ ಸರ್ಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ. ಆದ್ದರಿಂದ, ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಅಥವಾ ನಿರ್ದೇಶನದ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ಇತ್ಯರ್ಥಪಡಿಸಿತು.

Related Articles

Comments (0)

Leave a Comment