ಪರಿಶ್ರಮ ಸಂಸ್ಥೆಗೆ ಸಿಎ ನಿವೇಶನ ಹಂಚಿಕೆ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಮಧ್ಯಂತರ ಆದೇಶ
- by Legal Samachar Desk
- June 24, 2026
- 9 Views
ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸೇರಿದ ಪರಿಶ್ರಮ ಸಂಸ್ಥೆಗೆ 3 ನಾಗರಿಕ ಬಳಕೆಯ (ಸಿಎ) ನಿವೇಶನ ಹಂಚಿಕೆ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ (ಸಿಯುಡಿಎ) ನಿರ್ಣಯ ಪ್ರಶ್ನಿಸಿ ಗುಜರಾತ್ ಮೂಲದ ಸರ್ಕಾರೇತರ ಸಂಸ್ಥೆ ಪದ್ಮ ವಿಜಯ ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಜತೆಗೆ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಿಯುಡಿಎ, ಜಿಲ್ಲಾಧಿಕಾರಿ ಹಾಗೂ ಪ್ರದೀಪ್ ಈಶ್ವರ್ ಅವರ ಪರಿಶ್ರಮ ಎಜುಕೇಷನ್ ಟ್ರಸ್ಟ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಎಸ್. ಶ್ಯಾಮ್ ಸುಂದರ್, ಅರ್ಜಿ ಸ್ವೀಕರಿಸಲು ಅಂತಿಮ ದಿನಕ್ಕೆ ಮೊದಲೇ ನಾಗರಿಕ ಬಳಕೆಯ ನಿವೇಶನ ಹಂಚಿಕೆಗೆ ನಿರ್ಣಯ ಕೈಗೊಳ್ಳಲಾಗಿದೆ. ಇದು ಸಿಯುಡಿಎ ಕೈಗೊಂಡ ಕಾನೂನುಬಾಹಿರ ಕ್ರಮವಾಗಿದೆ ಹಾಗೂ ಏಕಪಕ್ಷೀಯವಾಗಿ ಶಾಸಕರ ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಮುಂದುವರಿದು, ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಪ್ರಾಧಿಕಾರ ಹಲವು ಬಾರಿ ಸ್ವೀಕರಿಸಲು ನಿರಾಕರಿಸಿ ಕೊನೆಯ ದಿನ ಅರ್ಜಿ ಸ್ವೀಕರಿಸಿದೆ. ಆದರೆ, ಸ್ಥಳೀಯ ಶಾಸಕರು ಪ್ರಭಾವ ಬೀರಿ ತಮ್ಮ ಸಂಸ್ಥೆಗೆ ಸಿಎ ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಆದ್ದರಿಂದ, ಆ ಹಂಚಿಕೆ ರದ್ದುಗೊಳಿಸಬೇಕು. ಮಧ್ಯಂತರ ಪರಿಹಾರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಬೇಕು. ಇಲ್ಲವಾದರೆ ಸಂಸ್ಥೆ ಹೆಸರಿಗೆ ದಾಖಲೆಗಳು ಬದಲಾಗಿವೆ ಎಂದರು.
ಪ್ರಕರಣವೇನು?
ನಂದಿ ಹೋಬಳಿಯ ಬೀಡಗಾನಹಳ್ಳಿ ಗ್ರಾಮದಲ್ಲಿ 2,484 ಚದರ ಮೀಟರ್ ವಿಸ್ತ್ರೀರ್ಣದ ಮೂರು ನಿವೇಶನಗಳನ್ನು ಶಾಸಕ ಪ್ರದೀಪ್ ಈಶ್ವರ್‌ಗೆ ಸೇರಿದ ಪರಿಶ್ರಮ ಎಜುಕೇಷನ್ ಟ್ರಸ್ಟ್‌ಗೆ ಹಂಚಿಕೆ ಮಾಡಿ 2026ರ ಜನವರಿ 14ರಂದು ಸಿಯುಡಿಎ ನಿರ್ಣಯ ಅಂಗೀಕರಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
Related Articles
Thank you for your comment. It is awaiting moderation.


Comments (0)