ಅಕ್ರಮ ವಲಸೆ ತಡೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆಗೆ ಹೈಕೋರ್ಟ್ ಆದೇಶ; ಸರ್ಕಾರಕ್ಕೆ 3 ತಿಂಗಳ ಗಡುವು

ಬೆಂಗಳೂರು: ಅಕ್ರಮ ವಲಸೆ ತಡೆಗಟ್ಟುವ ಸಂಬಂಧ ಮೂರು ತಿಂಗಳೊಳಗೆ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎನ್ನಲಾದ ಬಾಂಗ್ಲಾದೇಶದ ಪ್ರಜೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ನಾಗೇಂದ್ರಪ್ಪ ಟಿ. ಎಂಬುವವರ ವಿರುದ್ಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ಶುಕ್ರವಾರ ರದ್ದುಪಡಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣ ರದ್ದು ಕೋರಿ ನಾಗೇಂದ್ರಪ್ಪ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಪೀಠ, ಬೆಳ್ಳಂದೂರು ಮತ್ತು ವರ್ತೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎರಡೂ ಪ್ರಕರಣಗಳನ್ನು ರದ್ದುಪಡಿಸಿದೆ.

ಇದೇ ವೇಳೆ, ತಮ್ಮ ಬಂಧನವನ್ನು ಪ್ರಶ್ನಿಸಿ ಹಾಗೂ ಕಾನೂನುಬಾಹಿರವಾಗಿ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಕ್ಕಾಗಿ ಪರಿಹಾರ ಕೋರಿ ನಾಗೇಂದ್ರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಕ್ರಮ ವಲಸೆಯನ್ನು ನಿಭಾಯಿಸಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಸಮಿತಿಗಳನ್ನು ರಚಿಸಬೇಕು. ಈ ಸಂಬಂಧದ ಅನುಪಾಲನಾ ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಿಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣವೇನು?
ಬೆಂಗಳೂರಿನ ಡಿಎಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್‌ಗಳ ಸಮೀಪ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳು ಪಾಸ್‌ಪೋರ್ಟ್‌ ಅಥವಾ ವೀಸಾ ಇಲ್ಲದೆ ನೆಲೆಸಿದ್ದಾರೆ ಎಂದು 2026ರ ಜುಲೈ 22ರಂದು ಬೆಳ್ಳಂದೂರು ಪೊಲೀಸರಿಗೆ ನಾಗೇಂದ್ರಪ್ಪ ಅವರು ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಆ ವ್ಯಕ್ತಿಗಳನ್ನು ಗಡಿಪಾರು ಪ್ರಕ್ರಿಯೆಗಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಕರೆದೊಯ್ದಿದ್ದರು ಎಂದು ಅರ್ಜಿದಾರರು ತಿಳಿಸಿದ್ದಾರೆ.

ಆದರೆ, ಇದಾದ ಸುಮಾರು 15 ನಿಮಿಷಗಳಲ್ಲೇ ಬಾಂಗ್ಲಾದೇಶಿ ಮಹಿಳೆಯೊಬ್ಬರು ನಾಗೇಂದ್ರಪ್ಪ ವಿರುದ್ಧ ಹಲ್ಲೆಯ ಆರೋಪ ಮಾಡಿ ದೂರು ದಾಖಲಿಸಿದ್ದರು. ತಮ್ಮ ವಿರುದ್ಧದ ದೂರು ಪ್ರತೀಕಾರದ ಕ್ರಮವಾಗಿದೆ ಎಂಬುದು ನಾಗೇಂದ್ರಪ್ಪ ವಾದಿಸಿದ್ದರು. ಈ ದೂರಿನ ಆಧಾರದಲ್ಲಿ ಬೆಳ್ಳಂದೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 74, ಸೆಕ್ಷನ್ 126(2), ಸೆಕ್ಷನ್ 115(2), ಸೆಕ್ಷನ್ 79, ಸೆಕ್ಷನ್ 352, ಸೆಕ್ಷನ್ 351(2) ಮತ್ತು ಸೆಕ್ಷನ್ 351(3) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಾಥಮಿಕ ಪರಿಶೀಲನೆ ನಡೆಸದೆ ಹಾಗೂ ದೂರುದಾರರ ವೈದ್ಯಕೀಯ ಪರೀಕ್ಷೆ ಮಾಡಿಸದೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ನಾಗೇಂದ್ರಪ್ಪ ಆರೋಪಿಸಿದ್ದರು.
ಜುಲೈ 23ರಂದು ತಮ್ಮನ್ನು ಬಂಧಿಸಲಾಗಿದ್ದು, ಬಂಧನಕ್ಕೂ ಮುನ್ನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 35(3) ಅಡಿಯಲ್ಲಿ ಹಾಜರಾತಿಗೆ ನೋಟಿಸ್ ನೀಡಿರಲಿಲ್ಲ ಮತ್ತು ಸೆಕ್ಷನ್ 35(1)(ಬಿ)ರ ಅಗತ್ಯಗಳಿಗೆ ಅನುಗುಣವಾಗಿ ಬಂಧನಕ್ಕೆ ಸಾಕಷ್ಟು ಕಾರಣಗಳನ್ನು ದಾಖಲಿಸಿರಲಿಲ್ಲ ಎಂಬುದು ಅವರ ವಾದವಾಗಿತ್ತು. ಬಂಧನದ ಮೆಮೊ ಹಾಗೂ ಬಂಧನದ ಕಾರಣಗಳನ್ನು ಸಮರ್ಪಕವಾಗಿ ತಿಳಿಸಿರಲಿಲ್ಲ ಎಂದೂ ಅವರು ಆಕ್ಷೇಪಿಸಿದ್ದರು.

ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಪ್ರಕರಣವನ್ನೂ ನಾಗೇಂದ್ರಪ್ಪ ಪ್ರಶ್ನಿಸಿದ್ದರು. ಬಿಎನ್‌ಎಸ್‌ ಸೆಕ್ಷನ್ 115(2), 126(2), 351(2) ಮತ್ತು 352, ಜತೆಗೆ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಾಗೇಂದ್ರಪ್ಪ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ 2026ರ ಜುಲೈ 29ರಂದು ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಅಕ್ರಮ ವಲಸೆಯ ವಿಚಾರದಲ್ಲಿ ರಾಜ್ಯ ಪೊಲೀಸ್ ಇಲಾಖೆ ಮತ್ತು ಗೃಹ ಇಲಾಖೆಯ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿತ್ತು.

Related Articles

Comments (0)

Leave a Comment