ಸಿದ್ಧಾರ್ಥ ವಿಹಾರ ಟ್ರಸ್ಟ್‌ ಜಮೀನು ಹಂಚಿಕೆ ವಿವಾದ; ಪ್ರಕರಣದ ಮರುವಿಚಾರಣೆಗೆ ಹೈಕೋರ್ಟ್ ನಿರ್ಧಾರ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬ ಸದಸ್ಯರ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ನಿಯಮಬಾಹಿರವಾಗಿ ಜಮೀನು ಹಂಚಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಗಸ್ಟ್ 18ರಂದು ನೀಡಿದ್ದ ಆದೇಶ ಹಿಂಪಡೆದು, ಪ್ರಕರಣವನ್ನು ಮರುವಿಚಾರಣೆಗೆ ಕೈಗೆತ್ತಿಕೊಳ್ಳಲು ಹೈಕೋರ್ಟ್ ನಿರ್ಧರಿಸಿದೆ.

ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಟ್ರಸ್ಟಿ ರಾಹುಲ್‌ ಖರ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದ್ದು, ಪ್ರಕರಣದಲ್ಲಿ ಪ್ರತಿವಾದಿಗಳ ವಾದ ಆಲಿಸಲು ಅಕ್ಟೋಬರ್ 30ರಂದು ಮರುವಿಚಾರಣೆ ನಡೆಸಲು ತೀರ್ಮಾನಿಸಿದೆ.

ಕಳೆದ ಆಗಸ್ಟ್ 18ರಂದು ಹೈಕೋರ್ಟ್‌, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನೀಡಿದ್ದ ನಿರ್ದೇಶನವನ್ನು ರದ್ದುಪಡಿಸಿತ್ತು. ಪ್ರಕರಣದ ದೂರುದಾರರಾದ ‘ಲಂಚ ಮುಕ್ತ ಕರ್ನಾಟಕ ವೇದಿಕೆ’ ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಸಲ್ಲಿಸಿದ್ದ ಖಾಸಗಿ ದೂರಿನೊಂದಿಗೆ ಜೋಡಿಸಲಾಗಿದ್ದ ಪ್ರಮಾಣಪತ್ರದಲ್ಲಿ ಕಾನೂನುಬದ್ಧ ದೋಷವಿದೆ ಎಂದು ಗಮನಿಸಿದ್ದ ನ್ಯಾಯಾಲಯ, ಆ ದೋಷ ಸರಿಪಡಿಸಲು ದೂರುದಾರರಿಗೆ ಅವಕಾಶ ನೀಡಿತ್ತು. ಬಳಿಕ, ದೂರಿನಲ್ಲಿರುವ ಆರೋಪಗಳ ಕುರಿತು ಲೋಕಾಯುಕ್ತ ಪೊಲೀಸರ ತನಿಖೆ ಅಗತ್ಯವಿದೆಯೇ ಎಂಬುದನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕು ಎಂದು ಸೂಚಿಸಿತ್ತು.

ಆ ಆದೇಶ ಮರುಪರಿಶೀಲನೆ ಅಥವಾ ಆದೇಶ ಹಿಂಪಡೆಯುವಂತೆ ಕೋರಿ ರಾಹುಲ್ ಖರ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆಗಸ್ಟ್ 18ರ ಆದೇಶ ಹಿಂಪಡೆದು ಪ್ರಕರಣವನ್ನು ಮತ್ತೆ ಆಲಿಸಲು ನಿರ್ಧರಿಸಿದೆ.

ದೂರಿನಲ್ಲಿರುವ ಆರೋಪಗಳೇನು?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್‌ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಇತರರ ವಿರುದ್ಧ ದೂರುದಾರ ವಿಜಯರಾಘವ ಮರಾಠೆ ಆರೋಪಗಳನ್ನು ಮಾಡಿದ್ದಾರೆ. ಸಿದ್ಧಾರ್ಥ ವಿಹಾರ ಟ್ರಸ್ಟ್‌ ಅನ್ನು ಪರಿಶಿಷ್ಟ ಜಾತಿ ಸಮುದಾಯದ ಟ್ರಸ್ಟ್‌ ಎಂದು ತೋರಿಸಿ, ಬಿಡಿಎ ಇಂದ ಶೇ. 50 ರಿಯಾಯಿತಿಯಲ್ಲಿ ಜಮೀನು ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಬನಶಂಕರಿ 6ನೇ ಹಂತದಲ್ಲಿ ಅಂದಾಜು 8,125 ಚದರ ಮೀಟರ್‌ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ಟ್ರಸ್ಟ್‌ಗೆ ಮಂಜೂರು ಮಾಡಲಾಗಿತ್ತು. ಆ ಟ್ರಸ್ಟ್‌ ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳ ಜನರ ಹಿತಕ್ಕಾಗಿ ಸ್ಥಾಪಿತವಾಗಿದ್ದು, ಪರಿಶಿಷ್ಟ ಜಾತಿಗಾಗಿ ಮಾತ್ರ ಸ್ಥಾಪಿಸಲಾದ ಸಂಸ್ಥೆಯಲ್ಲ. ಆದ್ದರಿಂದ, ಎಸ್‌ಸಿ ವರ್ಗದಡಿ ನಿವೇಶನ ಹಾಗೂ ಶೇ.50ರ ರಿಯಾಯಿತಿ ಪಡೆಯಲು ಅದು ಅರ್ಹವಾಗಿರಲಿಲ್ಲ ಎಂಬುದು ದೂರುದಾರರ ವಾದವಾಗಿದೆ.

ಇದಲ್ಲದೆ, ದೇವನಹಳ್ಳಿ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಕೆಐಎಡಿಬಿ ಇಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಿರುವುದನ್ನೂ ದೂರುದಾರರು ಪ್ರಶ್ನಿಸಿದ್ದಾರೆ. ಏರೋಸ್ಪೇಸ್‌ ಅಥವಾ ಸಂಶೋಧನಾ ಕ್ಷೇತ್ರದಲ್ಲಿ ಅನುಭವವಿಲ್ಲದ ಟ್ರಸ್ಟ್‌ಗೆ ಈ ಜಮೀನು ನೀಡಲಾಗಿದೆ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿದೆ. ಆರೋಪಗಳು ಕೇಳಿ ಬಂದ ಬಳಿಕ ಜಮೀನನ್ನು ಹಿಂದಿರುಗಿಸಲಾಗಿದೆ ಎಂದು ವರದಿಗಳಿದ್ದರೂ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಬಳಿಕವೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಸಂಬಂಧ ಖಾಸಗಿ ದೂರು ಸಲ್ಲಿಸಲಾಗಿದ್ದು, ಲೋಕಾಯುಕ್ತ ತನಿಖೆಗೆ ಆದೇಶಿಸುವಂತೆ ಮನವಿ ಮಾಡಲಾಗಿದೆ.

Related Articles

Comments (0)

Leave a Comment