ಕೆಪಿಎಸ್ಸಿ ಹಗರಣ; ಪತ್ನಿ-ಮಗು ನೋಡಲು ಮಾನವೀಯತೆ ಆಧಾರದಲ್ಲಿ ಜಾಮೀನು ಕೋರಿ ಬಸವರಾಜ್ ಕನ್ನಾಳೆ ಅರ್ಜಿ
- by Prashanth Basavapatna
- October 7, 2026
- 11 Views
ಬೆಂಗಳೂರು: ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿರುವುದರಿಂದ ಅವರನ್ನು ನೋಡಲು ಬೀದರ್ಗೆ ತೆರಳಲು ಮಾನವೀಯತೆಯ ಆಧಾರದಲ್ಲಿ ಸೀಮಿತ ಅವಧಿಗೆ ಜಾಮೀನು ನೀಡಬೇಕು ಎಂದು ಕೋರಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಬಸವರಾಜ್ ಕನ್ನಾಳೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕನ್ನಾಳೆ ಪರ ಹಿರಿಯ ವಕೀಲ ಎಂ. ಅರುಣ ಶ್ಯಾಮ್ ಹಾಜರಾಗಿ, ಅರ್ಜಿದಾರರ ಪತ್ನಿ ಇಂದು ಹೆಣ್ಣು ಮಗು ಜನ್ಮ ನೀಡಿದ್ದಾರೆ. ಇದಕ್ಕಾಗಿ ಸೀಮಿತ ಅವಧಿಗೆ ಮಾನವೀಯತೆ ಆಧಾರದಲ್ಲಿ ಜಾಮೀನು ನೀಡಬೇಕು. ಈ ಸಂಬಂಧ ದಾಖಲೆ ಸಲ್ಲಿಸಲಾಗುವುದು. ಮೆರಿಟ್ ಮೇಲೆ ಜಾಮೀನು ಕೋರುತ್ತಿಲ್ಲ. ಕನ್ನಾಳೆ ಪೋಷಕರಿಗೆ ವಯಸ್ಸಾಗಿದೆ. ಮಾನವೀಯತೆಯ ಆಧಾರದಲ್ಲಿ ಜಾಮೀನು ಕೋರುತ್ತಿದ್ದೇವೆ. ಇದು ಮೂಲಭೂತ ಹಕ್ಕಾಗಿದ್ದು, ಇದಕ್ಕೆ ಸಂಬಂಧಿಸಿದ ತೀರ್ಪುಗಳು ಬಂದಿವೆ. ಯಾವುದೇ ಕಠಿಣ ಷರತ್ತು ವಿಧಿಸಿ ಜಾಮೀನು ನೀಡಬಹುದು. ಕಜಕಿಸ್ತಾನ ಟೂರ್ ಪ್ಯಾಕೇಜ್ನಲ್ಲಿ ಮೊದಲೇ ಪ್ರವಾಸಕ್ಕೆ ಕನ್ನಾಳೆ ಟಿಕೆಟ್ ಬುಕ್ ಮಾಡಿದ್ದರು. ವಾಪಸ್ ಬರುವ ಸಂಬಂಧಿತ ಟಿಕೆಟ್ ಅನ್ನೂ ಸಹ ಹಾಜರುಪಡಿಸಲಾಗುವುದು ಎಂದರು.
ರಾಜ್ಯ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಬಿ.ಎನ್. ಜಗದೀಶ್ ಅವರು, ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕನ್ನಾಳೆ ದೇಶ ತೊರೆಯಲು ಮುಂದಾಗಿದ್ದರು. ವಾಪಸ್ ಆಗುವ ಟಿಕೆಟ್ ಕಾಯ್ದಿರಿಸದೇ ದೇಶ ಬಿಡಲು ಮುಂದಾಗಿದ್ದ ಆತನನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ದೇಶ ತೊರೆಯಲು ಮುಂದಾಗಿದ್ದ ಕನ್ನಾಳೆ, ಏಕ ದೇಶ ಬಿಟ್ಟು ಹೋಗಲು ಮುಂದಾಗಿದ್ದರು ಎಂಬುದನ್ನು ಬಹಿರಂಗಪಡಿಸಬೇಕು. ಪತ್ನಿ-ಮಗುವನ್ನು ನೋಡಲು ಮಾನವೀಯತೆ ಆಧಾರದಲ್ಲಿ ಜಾಮೀನು ನೀಡಬಹುದು ನಿಜ. ಆದರೆ, ಕನ್ನಾಳೆಗೆ ಅಲ್ಲ. ಆತ ಹೋಗಿ ಮಗು ನೋಡಿ ಬರುವುದಕ್ಕೆ ನಾವೇ ಅವಕಾಶ ಮಾಡುತ್ತೇವೆ ಎಂದರು.
ಮುಂದುವರಿದು, ಕನ್ನಾಳೆ ಪತ್ನಿಗೆ ಸಹೋದರಿ, ಸಹೋದರ ಮತ್ತು ಅವರ ಪೋಷಕರು ಇದ್ದಾರೆ. ಅವರೆಲ್ಲರೂ ಬೀದರ್ನಲ್ಲಿದ್ದಾರೆ. ಆರೋಪಿ ಕನ್ನಾಳೆಯ ಪೋಸ್ಪೋರ್ಟ್ ಜಪ್ತಿ ಮಾಡುವ ಅಧಿಕಾರ ನಮಗಿಲ್ಲ. ಆತ ನಂಬಿಕೆಗೆ ಅರ್ಹನಲ್ಲ ಎಂಬ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ. ಕನ್ನಾಳೆಗೆ ಕಜಾಕಿಸ್ತಾನದಲ್ಲಿ ಕೆಲಸವೇನು ಇರಲಿಲ್ಲ. ಅಲ್ಲಿಗೆ ಏಕೆ ಓಡಿ ಹೋಗಲು ಮುಂದಾಗಿದ್ದರು? 2026ರ ಆಗಸ್ಟ್ನಿಂದ ಕನ್ನಾಳೆಯ ಪತ್ನಿಯು ಆಕೆಯ ಪೋಷಕರ ಜೊತೆ ಇದ್ದಾರೆ ಎಂದು ಆತನೇ ಅರ್ಜಿಯಲ್ಲಿ ಹೇಳಿದ್ದಾನೆ ಎಂದರು.
ವಿಚಾರಣೆಯ ವೇಳೆ ನ್ಯಾಯಪೀಠ, ಕನ್ನಾಳೆ ಓಡಿ ಹೋಗಬೇಕು ಎಂದು ಹೋಗಿದ್ದನೋ ಅಥವಾ ಯಾವ ಕಾರಣಕ್ಕಾಗಿ ಹೋಗಿದ್ದನೋ ನಮಗೆ ಗೊತ್ತಿಲ್ಲ. ಎಲ್ಲವನ್ನೂ ಬಹಿರಂಗಪಡಿಸಲಾಗದು. ಈಗ ಜನಿಸಿರುವ ಮಗುವಿನ ಜತೆಗೆ ಆತನಿಗೆ ಇನ್ನೂ ಎರಡು ಸಣ್ಣ ಮಕ್ಕಳು ಇದಾವಲ್ಲ. ಆತನ ಪಾಸ್ಪೋರ್ಟ್ ಜಪ್ತಿ ಮಾಡಿಲ್ಲವೇ? ಪ್ರತಿದಿನ ಸಮೀಪದ ಪೊಲೀಸ್ ಠಾಣೆಯಲ್ಲಿ ಹಾಜರಿ ಹಾಕಬೇಕು ಎಂಬ ಷರತ್ತು ವಿಧಿಸೋಣ. ದೇಶದಿಂದ ಹೊರ ಹೋಗಿ ಹಿಂದಿರುಗಲು ಟಿಕೆಟ್ ಬುಕ್ ಮಾಡಿಲ್ಲ ಎಂದ ಮಾತ್ರಕ್ಕೆ ಆತ ವಾಪಸ್ ಬರುವುದಿಲ್ಲ ಎಂದಲ್ಲ. ಇಂಥ ಪ್ರಕರಣಗಳಲ್ಲಿ ವಿನಾಯಿತಿ ನೀಡಬೇಕಾಗುತ್ತದೆ. ಕೊಲೆ ಮತ್ತು ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳಲ್ಲಿನ ಆರೋಪಿಗಳಿಗೂ ಇದೇ ನ್ಯಾಯಾಲಯ ಮಾನವೀಯತೆಯ ಆಧಾರದಲ್ಲಿ ಸ್ಪಂದಿಸಿದೆ ಎಂದು ನುಡಿಯಿತು.
ಅಂತಿಮವಾಗಿ, ಎಸ್ಪಿಪಿ ಅವರ ಕೋರಿಕೆಯ ಮೇರೆಗೆ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ (ಅಕ್ಟೋಬರ್ 8) ಮುಂದೂಡಿತು.
ಶಾಂತಾ ಹೊಸಮನಿ ಜಾಮೀನು ಅರ್ಜಿ ಮುಂದಿನ ವಾರಕ್ಕೆ:
ಕೆಪಿಎಸ್ಸಿ ಪರ ಹಾಜರಿದ್ದ ಹಿರಿಯ ವಕೀಲ ರೊಬೆನ್ ಜಾಕಬ್, ಆಯೋಗವು ಮುಚ್ಚಿದ ಲಕೋಟೆಯಲ್ಲಿ ಒಂಬತ್ತು ಅಭ್ಯರ್ಥಿಗಳಿಗೆ ಶಾಂತಾ ಹೊಸಮನಿ ಒಳಗೊಂಡ ಮೂವರು ಸದಸ್ಯರ ಸಮಿತಿಯು ನೀಡಿರುವ ಅಂಕಗಳ ದಾಖಲೆಯನ್ನು ಒದಗಿಸಿದೆ ಎಂದರು. ಇದಕ್ಕೆ ನ್ಯಾಯಪೀಠ, ಮುಂದಿನ ವಿಚಾರಣೆಯ ದಿನದಂದು ಅದನ್ನು ತನ್ನಿ. ಈಗ ಅದು ನಿಮ್ಮ ಬಳಿಯೇ ಇರಲಿ ಎಂದಿತು.
ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಹಾಗೂ ಅಮಾನತುಗೊಂಡಿರುವ ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ಮುಂದಿನ ವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)