ಹೆಸರಿನಿಂದ ಗುರುತಿಸಿಕೊಳ್ಳುವುದು ಪ್ರತಿಯೊಬ್ಬರ ನಾಗರಿಕ ಹಕ್ಕು; ಬಾಲಕಿಯ ಹೆಸರು ಬದಲಿಸಲು ಹೈಕೋರ್ಟ್ ಅನುಮತಿ
- by Prashanth Basavapatna
- October 8, 2026
- 8 Views
ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೆಸರಿನ ಮೂಲಕ ಗುರುತಿಸಿಕೊಳ್ಳುವುದು ನಾಗರಿಕ ಹಕ್ಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ನಂಬಿಕೆಯ ಆಧಾರದಲ್ಲಿ ಅಪ್ರಾಪ್ತ ಬಾಲಕಿಯ ಹೆಸರನ್ನು ಶಾಲಾ ದಾಖಲೆಗಳಲ್ಲಿ ಬದಲಾಯಿಸಲು ಅನುಮತಿ ನೀಡಿದೆ.
ಬೆಂಗಳೂರಿನ ನಿಂಗೇಗೌಡ ಎಂಬುವರು ತಮ್ಮ ಮಗಳ ಲಕ್ಷ್ಮಿ ಎನ್. ಎಂಬ ಹೆಸರನ್ನು ವೀಣಾ ಎನ್. ಎಂದು ಬದಲಾಯಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೆಸರು ಬದಲಾವಣೆಗೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ದಾವೆ ವಜಾಗೊಳಿಸಿದ್ದ ಬೆಂಗಳೂರಿನ ಸಿವಿಲ್ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೆಸರಿನಿಂದಲೇ ಗುರುತಿಸಲ್ಪಡುತ್ತಾನೆ. ಹೆಸರಿನ ತಿದ್ದುಪಡಿ ಅಥವಾ ಬದಲಾವಣೆಯು ನಾಗರಿಕ ಹಕ್ಕಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಬಹುದು. ನಾಗರಿಕ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 9ರಡಿಯಲ್ಲಿ ಇಂತಹ ದಾವೆಯ ವಿಚಾರಣೆ ನಡೆಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕಿದೆ ಎಂದು ಹೇಳಿದೆ.
ಶಾಲಾ ಆಡಳಿತವು ಸ್ವತಂತ್ರವಾಗಿ ಹೆಸರು ಬದಲಿಸುವ ಅಧಿಕಾರ ಹೊಂದಿಲ್ಲ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸಕ್ಷಮ ಸಿವಿಲ್ ನ್ಯಾಯಾಲಯದಿಂದ ಡಿಕ್ರಿ ಪಡೆಯುವುದೇ ಸೂಕ್ತ ಕಾನೂನು ಮಾರ್ಗವಾಗಿದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಹೆಸರು ಬದಲಿಸುವ ಉದ್ದೇಶದ ಕುರಿತು ಪೋಷಕರು ದಿನಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆಯನ್ನೂ ಹೊರಡಿಸಿದ್ದರು. ಅದಕ್ಕೆ ಯಾರಿಂದಲೂ ಆಕ್ಷೇಪ ವ್ಯಕ್ತವಾಗಿಲ್ಲ ಎಂಬ ಅಂಶವನ್ನೂ ಪರಿಗಣಿಸಿದೆ.
ಅಂತಿಮವಾಗಿ, ಅರ್ಜಿದಾರರ ಮಗಳ ಶಾಲೆಯ ಎಲ್ಲ ದಾಖಲೆಗಳಲ್ಲಿ ‘ಲಕ್ಷ್ಮೀ ಎನ್.’ ಬದಲಿಗೆ ‘ವೀಣಾ ಎನ್.’ ಎಂದು ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಡ್ಡಾಯ ನಿರ್ದೇಶನ ನೀಡಿ ಇನ್ನು ಮುಂದೆ ಬಾಲಕಿಯನ್ನು ವೀಣಾ ಎನ್. ಎಂದು ಗುರುತಿಸಬೇಕು ಎಂದೂ ಘೋಷಿಸಿದೆ.
ಹೊಸ ಹೆಸರಿಗೆ ದಾಖಲೆ ಕೇಳವುದು ಸರಿಯಲ್ಲ:
2010ರ ಅಕ್ಟೋಬರ್ 10ರಂದು ಜನಿಸಿದ್ದ ಬಾಲಕಿಗೆ ನಾಮಕರಣದ ಸಂದರ್ಭದಲ್ಲಿ ‘ಲಕ್ಷ್ಮಿ ಎನ್.’ ಎಂದು ಹೆಸರಿಡಲಾಗಿತ್ತು. ಬಳಿಕ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯಂತೆ ‘ವೀಣಾ ಎನ್.’ ಎಂಬ ಹೆಸರು ಮಗುವಿಗೆ ಹೆಚ್ಚು ಶ್ರೇಯಸ್ಸು ತರಲಿದೆ ಎಂದು ಪೋಷಕರು ಭಾವಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆ ಹಾಗೂ ಇತರ ಸಾರ್ವಜನಿಕ ದಾಖಲೆಗಳಲ್ಲಿ ಹೆಸರು ಬದಲಾಯಿಸಲು ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ವೀಣಾ ಎನ್. ಎಂಬ ಹೆಸರನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ದಾವೆಯನ್ನು ವಜಾಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಕ್ರಮವನ್ನು ಒಪ್ಪದ ಹೈಕೋರ್ಟ್, ಬಾಲಕಿಯ ಹೆಸರು ಆರಂಭದಿಂದಲೇ ತಪ್ಪಾಗಿ ದಾಖಲಾಗಿದೆ ಎಂಬುದು ಪೋಷಕರ ವಾದವಲ್ಲ. ಬದಲಿಗೆ ಈಗಿರುವ ಹೆಸರನ್ನು ಹೊಸ ಹೆಸರಿಗೆ ಬದಲಿಸಬೇಕೆಂಬುದಷ್ಟೇ ಅವರ ಕೋರಿಕೆಯಾಗಿದೆ. ಆದ್ದರಿಂದ, ಹೊಸ ಹೆಸರಿನ ಹಿಂದಿನ ದಾಖಲೆಗಳನ್ನು ಕೇಳುವುದು ಸಮರ್ಥನೀಯವಲ್ಲ ಎಂದು ಹೇಳಿದೆ.
Related Articles
Thank you for your comment. It is awaiting moderation.


Comments (0)