ರಾಜ್ಯದ ಗ್ರಾ.ಪಂ.ಗಳ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣ; ಹೈಕೋರ್ಟ್ಗೆ ರಾಜ್ಯ ಸರ್ಕಾರದ ಮಾಹಿತಿ
- by Prashanth Basavapatna
- September 11, 2026
- 5 Views
ಬೆಂಗಳೂರು: ರಾಜ್ಯದ 5,864 ಗ್ರಾಮ ಪಂಚಾಯಿತಿಗಳ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಮುಗಿದಿರುವುದನ್ನು ಎಲ್ಲ ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ (ಎಸ್ಇಸಿ) ತಂದಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಮುಂದಿನ ಪ್ರಕ್ರಿಯೆ ಆರಂಭಿಸುವುದು ಎಸ್ಇಸಿಗೆ ಬಿಟ್ಟ ವಿಚಾರ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ವಾರ್ಡ್ಗಳ ಸಂಖ್ಯೆ ಮತ್ತು ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಪ್ರತಿಮಾ ಹೊನ್ನಾಪುರ ಅವರು, ಗ್ರಾಮ ಪಂಚಾಯಿತಿಗಳಿಗೆ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಲಾಗಿದೆ. ಮುಂದಿನ ಕ್ರಮಕೈಗೊಳ್ಳುವುದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ಎಲ್ಲ ಪ್ರಕ್ರಿಯೆ ಮುಗಿದಿದೆ. ಈ ಸಂಬಂಧ 2026ರ ಸೆಪ್ಟೆಂಬರ್ 8ರಂದು ಪ್ರಮಾಣಪತ್ರವನ್ನೂ ಸಲ್ಲಿಸಲಾಗಿದೆ. ಮೀಸಲಾತಿ ನಿಗದಿಪಡಿಸಿರುವುದರಿಂದ ಅರ್ಜಿಯು ಈಗ ಅಸಿಂಧುವಾಗಿದೆ ಎಂದರು.
ಆಗ ನ್ಯಾಯಪೀಠ, ಅರ್ಜಿಯಲ್ಲಿನ ಕೋರಿಕೆಯಂತೆ ಅಗತ್ಯವಿದ್ದ ಕೆಲಸವನ್ನು ರಾಜ್ಯ ಸರ್ಕಾರ ಮಾಡಿರುವುದರಿಂದ ಅರ್ಜಿ ಅಸಿಂಧುವಾಗಿದೆ. ಈಗ ಮುಂದಿನ ಅಗತ್ಯ ಕ್ರಮಕೈಗೊಳ್ಳುವುದು ರಾಜ್ಯ ಚುನಾವಣಾ ಆಯೋಗದ ಕೆಲಸ ಎಂದಿತಲ್ಲದೆ, ಎಎಜಿ ಹೇಳಿಕೆಯನ್ನು ದಾಖಲಿಸಿಕೊಂಡು ಆಯೋಗದ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿತು.
ಇದೇ ವೇಳೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ದೇಶನದ ಪ್ರಕಾರ ಇಂದು ಕರಡು ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತಿದೆ. ಆದ್ದರಿಂದ, 10 ದಿನಗಳ ಬಳಿಕ ಕಾಲಾವಕಾಶ ನೀಡಿದರೆ ಈ ಸಂಬಂಧ ದಾಖಲೆಯನ್ನು ಹಾಜರುಪಡಿಸಲಾಗುವುದು ಎಂದು ಎಎಜಿ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನು ಪುರಸ್ಕರಿಸಿದ ನ್ಯಾಯಪೀಠ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)