ವಿಟಿಯು ಕುಲಪತಿ ಸೇವಾವಧಿ ವಿಸ್ತರಣೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್; ಎಸ್. ವಿದ್ಯಾಶಂಕರ್ ಹುದ್ದೆ ಅಬಾಧಿತ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿ‍ಯು) ಕುಲಪತಿ ಹುದ್ದೆಯಲ್ಲಿ ಎಸ್. ವಿದ್ಯಾಶಂಕರ್ ಅವರ ಸೇವಾವಧಿ ವಿಸ್ತರಣೆ ಪ್ರಶ್ನಿಸಲಾದ ಹಾಗೂ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕೋರಲಾಗಿದ್ದ ‘ಕೊ ವಾರಂಟೊ’ ರಿಟ್‌ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ವಿದ್ಯಾಶಂಕರ್ ಅವರನ್ನು ಕಾನೂನು–ಸಂವಿಧಾನ ಬಾಹಿರವಾಗಿ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿ–2018ಕ್ಕೆ ವಿರುದ್ಧವಾಗಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ನಾಗೇಶ್ವರ ರಾವ್ ತುಬಟಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕುಲಪತಿ ನೇಮಕಾತಿಗಾಗಿ ರಚಿಸಲಾಗಿದ್ದ ಶೋಧನಾ ಸಮಿತಿಯಲ್ಲಿ ಯುಜಿಸಿ ಪ್ರತಿನಿಧಿ ಇರಲಿಲ್ಲ. ವಿದ್ಯಾಶಂಕರ್ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಸದ್ಭಾವನೆ ಇಲ್ಲದ ವ್ಯಕ್ತಿಯನ್ನು ಉನ್ನತವಾದ ಶೈಕ್ಷಣಿಕ ಹುದ್ದೆಯಲ್ಲಿ ಮುಂದುವರಿಸುವುದು ಸೂಕ್ತವಲ್ಲ. ಆದ್ದರಿಂದ, ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಈ ಮನವಿಯನ್ನು ತಳ್ಳಿಹಾಕಿರುವ ನ್ಯಾಯಪೀಠ, ಅಕ್ರಮ ಎನ್ನುವುದು ಅಸಾಧಾರಣವಾದ ಸಾರ್ವಜನಿಕ ಕಾನೂನು ಪರಿಹಾರವನ್ನು ಸಮರ್ಥಿಸುವಂತೆ ಸ್ಪಷ್ಟವಾಗಿರಬೇಕು. ಅಂತೆಯೇ, ಇಂತಹ ಸವಾಲುಗಳನ್ನು ಕೋರ್ಟ್‌ಗೆ ಹೊತ್ತು ತರುವ ವ್ಯಕ್ತಿಯ ಉದ್ದೇಶ ಅಥವಾ ದುರುದ್ದೇಶವನ್ನೂ ಪರಿಶೀಲಿಸಬೇಕು ಎಂಬ ಪೂರ್ವನಿದರ್ಶನ ತೀರ್ಪುಗಳ ಸೂಕ್ಷ್ಮವನ್ನು ಉಲ್ಲೇಖಿಸಿದೆ.

ಅವಧಿ ವಿಸ್ತರಣೆ ಸಂದರ್ಭದಲ್ಲಿ ಹೊಸದಾಗಿ ಅರ್ಜಿ ಆಹ್ವಾನಿಸಿ ಶೋಧನಾ ಸಮಿತಿ ರಚನೆ ಮಾಡಬೇಕೆಂಬ ನಿಯಮವೇನೂ ಇ‌ಲ್ಲ. ವಿದ್ಯಾಶಂಕರ್‌ ಅವರನ್ನು ಮೊದಲ ಬಾರಿಗೆ ನೇಮಕ ಮಾಡಿದಾಗ ಆ ನೇಮಕಾತಿಯನ್ನು ಪ್ರಶ್ನಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಆದ್ದರಿಂದ, ಈ ವಿಷಯವನ್ನು ಪದೇಪದೆ ಶೋಧನೆಗೆ ಒಳಪಡಿಸುವ ಅಗತ್ಯ ಎದುರಾಗುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ವಿದ್ಯಾಶಂಕರ್‌ ಅವರನ್ನು ಹುದ್ದೆಯಲ್ಲಿ ಮುಂದುವರಿಸುವುದು ಕಾನೂನು ಮತ್ತು ಸಾಂವಿಧಾನಕವಾಗಿ ಎಸಗಲಾದ ಲೋಪ ಎಂಬುದನ್ನು ಸಾಬೀತು ಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಕೊ ವಾರಂಟೊ ಅನಗತ್ಯ:
ಹಾಲಿ ಪ್ರಕರಣದಲ್ಲಿ ಹೈಕೋರ್ಟ್‌ ತನ್ನ ವಿಶೇಷಾಧಿಕಾರವಾದ ಕೊ ವಾರಂಟೊ (ಯಾವುದೇ ವ್ಯಕ್ತಿ ತನಗೆ ಅರ್ಹತೆ ಇಲ್ಲದಿದ್ದರೂ ಅಕ್ರಮವಾಗಿ ಸಾರ್ವಜನಿಕ ಹುದ್ದೆ ಆಕ್ರಮಿಸಿಕೊಳ್ಳುವುದನ್ನು ತಡೆಯಲು ರಿಟ್‌ ಅರ್ಜಿ ವ್ಯಾಪ್ತಿಯಲ್ಲಿ ಹೊರಡಿಸುವ ಆದೇಶ) ಬಳಕೆ ಮಾಡುವ ಅಗತ್ಯವಿಲ್ಲ. ಯಾವುದೋ ಊಹೆ, ಅತೃಪ್ತಿ ಅಥವಾ ಮರುಬಳಕೆಯ ದೂರುಗಳ ಮೇಲೆ ಕೊ ವಾರಂಟೊ ದಂತಹ ಪ್ರಬಲವಾದ ರಿಟ್ ಆದೇಶ ಹೊರಡಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

ಮೇಲ್ಮನವಿಯೂ ವಜಾ:
ವಿದ್ಯಾಶಂಕರ್ ನೇಮಕಾತಿ ಪ್ರಶ್ನಿಸಿ ಬಿ. ಯೋಗೇಶ್‌ ಮತ್ತು ಕೆ.ಎ. ವೇಣುಗೋಪಾಲ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್‌. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ 2025ರ ನವೆಂಬರ್ 27ರಂದು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ಎಚ್‌. ಶಾಂತಿಭೂಷಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೆಪ್ಟೆಂಬರ್ 10ರಂದು ವಜಾಗೊಳಿಸಿದೆ.

ಹಿನ್ನೆಲೆ:
ವಿದ್ಯಾಶಂಕರ್ ಈ ಹಿಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) ಕುಲಪತಿಯಾಗಿದ್ದರು. 2022ರ ಸೆಪ್ಟೆಂಬರ್ 29ರಂದು ಮೂರು ವರ್ಷಗಳಿಗೆ ವಿಟಿ‍ಯು ಕುಲಪತಿಯಾಗಿ ನೇಮಕವಾದರು. ಈ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸಹ ವಜಾಗೊಳಿಸಿತ್ತು.

ಈ ಮಧ್ಯೆ ರಾಜ್ಯಪಾಲರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ–1994ರ ಕಲಂ 13(4)ರ ಅಡಿಯಲ್ಲಿ ವಿದ್ಯಾಶಂಕರ್ ಅವರ ಅಧಿಕಾರಾವಧಿಯನ್ನು 3 ವರ್ಷಗಳಿಗೆ ವಿಸ್ತರಿಸಿ 2025ರ ಸೆಪ್ಟೆಂಬರ್ 3ರಿಂದ ಅನ್ವಯವಾಗುವಂತೆ ಆದೇಶಿಸಿದ್ದರು.

Related Articles

Comments (0)

Leave a Comment