ಪಿಎಸ್‌ಐ ಮೇಲೆ ಪೇಪರ್‌ವೇಟ್ ಎಸೆದು ಹಲ್ಲೆ; ಚಿಕ್ಕಮಗಳೂರು ಮಾಜಿ ಎಸ್‌‌ಪಿ ವಿಕಾಶ್ ಕುಮಾರ್ ವಿಕಾಶ್ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸದ ಅಧೀನ ಪೊಲೀಸ್‌ ಅಧಿಕಾರಿಯ ಮೇಲೆ ಪೇಪರ್‌ವೇಟ್‌ ಎಸೆದು ಗಾಯಗೊಳಿಸಿದ ಆರೋಪ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಮಾಜಿ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ವಿಕಾಶ್‌ ಕುಮಾರ್‌ ವಿಕಾಶ್‌ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಇದೇ ವೇಳೆ, ಎರಡನೇ ಆರೋಪಿಯಾಗಿರುವ ಚಿಕ್ಕಮಗಳೂರು ಪೊಲೀಸ್ ಠಾಣೆಯ ಮಾಜಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಪಂಚಾಕ್ಷರಯ್ಯ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ.

ಹದಿನಾಲ್ಕು ವರ್ಷದ ಹಿಂದೆ ನಡೆದಿದ್ದ (2012) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎದುರು ಬಾಕಿ ಇರುವ ನ್ಯಾಯಿಕ ಪ್ರಕ್ರಿಯೆ ರದ್ದು ಕೋರಿ ವಿಕಾಶ್ ಕುಮಾರ್ ವಿಕಾಶ್ ಹಾಗೂ ಅಂದಿನ ಸರ್ಕಲ್ ಇನ್‌ಸ್ಪೆಕ್ಟರ್ ಪಂಚಾಕ್ಷರಯ್ಯ ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ದೂರುದಾರರನ್ನು ಕೊಠಡಿಗೆ ಕರೆಸಿಕೊಂಡು ಬಾಗಿಲು ಹಾಕಿ, ಪೇಪರ್‌ವೇಟ್‌ನಿಂದ ಹೊಡೆದು ಹುಬ್ಬಿನಲ್ಲಿ ರಕ್ತಸ್ರಾವವಾಗುವಂತೆ ಗಾಯಗೊಳಿಸಿದ ಮಾಜಿ ಎಸ್‌ಪಿ ಅವರ ಕೃತ್ಯವನ್ನು ಅಧಿಕೃತ ಕರ್ತವ್ಯದ ಪ್ರಾಮಾಣಿಕ ನಿರ್ವಹಣೆ ಎಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ವಿಕಾಶ್ ಕುಮಾರ್ ವಿಕಾಶ್ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?
ದೈಹಿಕ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಆರೋಪವು ಅಧಿಕೃತ ಕರ್ತವ್ಯದೊಂದಿಗೆ ಸಂಬಂಧ ಹೊಂದಿರುವಂತೆ ಕಾಣುವುದಿಲ್ಲ. ಪ್ರಕರಣದ ಈ ಹಂತದಲ್ಲಿ ಪ್ರಾಸಿಕ್ಯೂಷನ್‌ ದಾಖಲಿಸಿರುವ ಸಾಕ್ಷ್ಯಗಳನ್ನು ಅಲ್ಲಗಳೆಯದ ಸ್ಥಿತಿಯಲ್ಲಿಯೇ ಪರಿಶೀಲಿಸಬೇಕಾಗುತ್ತದೆ. ಮೊದಲ ಆರೋಪಿ ಇಂತಹ ಕ್ರಮ ಕೈಗೊಳ್ಳಲು ಸಂದರ್ಭಗಳು ಅನಿವಾರ್ಯವಾಗಿದ್ದವೇ, ಘಟನೆಗೆ ಸಮಂಜಸ ವಿವರಣೆ ಇದೆಯೇ ಅಥವಾ ದೂರಿನಲ್ಲಿ ಹೇಳಿದಂತೆಯೇ ಘಟನೆ ನಡೆದಿದೆಯೇ ಎಂಬುದನ್ನು ಸೂಕ್ತ ಹಂತದಲ್ಲಿ ನಿರ್ಧರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಸರ್ಕಾರಿ ನೌಕರರು ಮತ್ತು ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಈಗಾಗಲೇ ಆರೋಪಗಳನ್ನು ಪರಿಗಣಿಸುವ ಹಂತವನ್ನು ದಾಟಿದೆ. ಆದ್ದರಿಂದ, ಆರೋಪಿಗಳ ನಿರ್ದಿಷ್ಟ ಕೃತ್ಯಗಳು ಅಧಿಕೃತ ಕರ್ತವ್ಯಕ್ಕೆ ಸಂಪೂರ್ಣವಾಗಿ ಅಥವಾ ಸಮಂಜಸವಾಗಿ ಸಂಬಂಧಿಸಿವೆಯೇ ಎಂಬುದನ್ನು ಪರಿಶೀಲಿಸುವುದು ಸೂಕ್ತ ಎಂದು ನ್ಯಾಯಪೀಠ ಹೇಳಿದೆ.

ಅದರಂತೆ, ಮಾಜಿ ಎಸ್‌ಪಿ ವಿಕಾಶ್‌ ಕುಮಾರ್‌ ವಿಕಾಶ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 342 (ಅಕ್ರಮ ಬಂಧನ), 324 (ಅಪಾಯಕಾರಿ ಆಯುಧ ಅಥವಾ ಸಾಧನದಿಂದ ಗಾಯಗೊಳಿಸುವುದು), 114 (ಅಪರಾಧ ನಡೆದಾಗ ಪ್ರಚೋದಕನ ಉಪಸ್ಥಿತಿ), 504 (ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದ ಅವಮಾನ), 506 (ಕ್ರಿಮಿನಲ್‌ ಬೆದರಿಕೆ) ಹಾಗೂ 34 (ಸಮಾನ ಉದ್ದೇಶ) ಅಡಿ ದಾಖಲಾಗಿರುವ ಪ್ರಕರಣ‌ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಅರ್ಜಿದಾರರು ತಮ್ಮ ಎಲ್ಲ ವಾದಗಳನ್ನೂ ವಿಚಾರಣಾ ನ್ಯಾಯಾಲಯದ ಮುಂದೆ ಮಂಡಿಸಲು ಅವಕಾಶ ಕಲ್ಪಿಸಿದೆ.

ಇನ್‌ಸ್ಪೆಕ್ಟರ್ ವಿರುದ್ಧದ ಪ್ರಕರಣ ರದ್ದು:
ದೂರುದಾರರು ಮತ್ತು ಆರೋಪಿಗಳು ಪೊಲೀಸ್‌ ಅಧಿಕಾರಿಗಳಾಗಿದ್ದು, ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕಾದ ಸಮವಸ್ತ್ರಧಾರಿ ಪಡೆಗೆ ಸೇರಿದವರು. ಇಂತಹ ಪಡೆಯ ಸಿಬ್ಬಂದಿ ಶಿಸ್ತು ಕಾಪಾಡಿಕೊಳ್ಳುವುದು ಅಗತ್ಯ. ಎರಡನೇ ಆರೋಪಿಯು ದೂರುದಾರರನ್ನು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸದಿರುವುದಕ್ಕೆ ತರಾಟೆಗೆ ತೆಗೆದುಕೊಂಡಿರುವುದು ಮತ್ತು ಮೌಖಿಕವಾಗಿ ಬೆದರಿಸಿರುವ ಆರೋಪಗಳು ಶಿಸ್ತು ಕಾಪಾಡುವ ಉದ್ದೇಶ ಹೊಂದಿವೆ. ಅವು ಅಧಿಕೃತ ಕರ್ತವ್ಯದೊಂದಿಗೆ ಸಂಬಂಧ ಹೊಂದಿದ್ದು, ಹೆಚ್ಚೆಂದರೆ ಕರ್ತವ್ಯ ನಿರ್ವಹಣೆಯ ಸಮಂಜಸ ಮಿತಿಮೀರಿದ ಕ್ರಮವೆಂದು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಅಂದಿನ ಇನ್‌ಸ್ಪೆಕ್ಟರ್ ಪಂಚಾಕ್ಷರಯ್ಯ ಅರ್ಜಿ ಪುರಸ್ಕರಿಸಿ ಪ್ರಕರಣ ರದ್ದುಪಡಿಸಿದೆ.

ಆರೋಪವೇನು?
ಮಲ್ಲಂದೂರು ಪೊಲೀಸ್‌ ಠಾಣೆಯ ಅಪರಾಧ ವಿಭಾಗದಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ದ ದೂರುದಾರರಾದ ಜಿ.ಎಸ್‌. ಚಂದ್ರಶೇಖರ್‌ 2012ರ ಜನವರಿಯಲ್ಲಿ ಕರ್ತವ್ಯದಲ್ಲಿದ್ದಾಗ ಮಾಜಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕರೆ ಮಾಡಿ ಕ್ರೀಡಾ ಚಟುವಟಿಕೆಗೆ ಗೈರಾಗಿದ್ದನ್ನು ಪ್ರಶ್ನಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅನಾರೋಗ್ಯದ ಕಾರಣ 2011ರ ಡಿಸೆಂಬರ್‌ನಿಂದ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದಾಗ, ಇನ್‌ಸ್ಪೆಕ್ಟರ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಇಲಾಖಾ ವಿಚಾರಣೆಯ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ನಂತರ ದೂರುದಾರರನ್ನು ಆಗಿನ ಎಸ್‌ಪಿ ಕಚೇರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ಬೆದರಿಕೆ ಹಾಕಿ ಪೇಪರ್‌ವೇಟ್‌ ಎಸೆಯಲಾಗಿತ್ತು ಎಂದು ಆರೋಪಿಸಲಾಗಿದೆ.

Related Articles

Comments (0)

Leave a Comment