ಕೆಪಿಎಸ್‌ಸಿ ಅಕ್ರಮ; ಮಾಜಿ ಅಧ್ಯಕ್ಷ ಶಿವಶಂಕರಪ್ಪ ನಿರೀಕ್ಷಣಾ ಜಾಮೀ‌ನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಲೋಕಾ ಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾಗೊಳಿಸಿ ಆದೇಶಿಸಿದೆ. ಇದರಿಂದ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷರಿಗೆ ಬಂಧನ ಭೀತಿ ಎದುರಾಗಿದೆ.

ಇದಕ್ಕೂ ಮುನ್ನ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಕೆಪಿಎಸ್‌ಸಿಯ ಎಲ್ಲ ಪದಾಧಿಕಾರಿಗಳ ಬಗ್ಗೆಯೂ ಆರೋಪ ಮಾಡಲಾಗಿದೆ. ಸಂಬಂಧಿಗೆ ನೆರವಾದ ಆರೋಪ ಮಾತ್ರ ಅರ್ಜಿದಾರರ ವಿರುದ್ಧ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಇಂಥ ಕೃತ್ಯಗಳಿಂದಾಗಿ ಇತ್ತೀಚೆಗೆ ದೇಶದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದ ಪರಿಣಾಮ ಅನೇಕ ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ 24 ಪ್ರತಿಭಾವಂತರಿಗೆ ಅನ್ಯಾಯವಾಗಿದೆ ಎಂದು ವರದಿ ಇದೆ. ಹೀಗಾದರೆ, ಹಗಲು-ರಾತ್ರಿ ಎನ್ನದೆ ಓದಿದವರ ಕಥೆ ಏನಾಗಬೇಕು ಎಂದು ಪ್ರಶ್ನಿಸಿತಲ್ಲದೆ, ಆಯೋಗದ ಮೇಲಿನ ಜನರ ವಿಶ್ವಾಸ ನಾಶವಾಗಿದೆ. ಜನರು ಅಸಹಾಯಕರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತು.

ವಾದ ಮುಂದುವರಿಸಿದ ಅರುಣ ಶ್ಯಾಮ್, ಪ್ರಶ್ನೆಪತ್ರಿಕೆ ತಯಾರಿ, ಟ್ಯಾಬುಲೇಷನ್‌, ಒಎಂಆರ್‌ ಎಲ್ಲವೂ ಪರೀಕ್ಷಾ ನಿಯಂತ್ರಣಾ ಪ್ರಾಧಿಕಾರದ ಬಳಿ ಇರುತ್ತದೆ. ಪರೀಕ್ಷಾ ನಿಯಂತ್ರಕರು ಅಕ್ರಮಗಳಿಗೆ ಜವಾಬ್ದಾರರಾಗಿದ್ದು, ಐಎಎಸ್‌ ಅಧಿಕಾರಿಯಾಗಿದ್ದಾರೆ. ಅವರು ಕೆಪಿಎಸ್‌ಸಿ ಕಾರ್ಯದರ್ಶಿಗೆ ಉತ್ತರ ನೀಡಬೇಕಾಗುತ್ತದೆ. ಒಎಂಆರ್‌ ಶೀಟುಗಳನ್ನು ತನಿಖೆಗೆ ಕಳುಹಿಸಲಾಗಿದೆ ಎಂದರು.

ಮುಂದುವರಿದು, ಅರ್ಜಿದಾರರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಯಾವುದೇ ದಾಖಲೆ ಇಲ್ಲ. ಪರೀಕ್ಷಾ ನಿಯಂತ್ರಕರು ಮತ್ತು ಕಿಂಗ್‌ಪಿನ್‌ ಬಂಧಿಸಲಾಗಿದೆ. ಇ.ಡಿ ತನಿಖೆಯಲ್ಲೂ ಏನೂ ಪತ್ತೆಯಾಗಿಲ್ಲ. ಅರ್ಜಿದಾರರ ಮೊಬೈಲ್‌ ಫೋನ್‌ ಮಾತ್ರ ವಶಕ್ಕೆ ಪಡೆಯಲಾಗಿದೆ. ಇದನ್ನು ಹೊರತುಪಡಿಸಿ ಏನನ್ನೂ ಸಾಹುಕಾರ್‌ ಅವರಿಂದ ಜಪ್ತಿ ಮಾಡಿಲ್ಲ. ಒಎಂಆರ್‌ ಶೀಟುಗಳನ್ನು ಕೆಪಿಎಸ್‌ಸಿಯಿಂದ ಪೊಲೀಸರು ಜಪ್ತಿ ಮಾಡಿದ್ದು, ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ, ಅರ್ಜಿದಾರರ ವಿರುದ್ಧ ಈ ಪ್ರಕರಣ ಬಿಟ್ಟರೆ ಬೇರೆ ಯಾವುದೇ ಪ್ರಕರಣ ಇಲ್ಲವೇ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅರುಣ್ ಶ್ಯಾಮ್, ಇದು ಬಿಟ್ಟು ಯಾವುದೇ ಪ್ರಕರಣವಿಲ್ಲ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ಶನಿವಾರ ಕುಟುಂಬದ ಕಾರ್ಯಕ್ರಮವಿದ್ದರಿಂದ ವಿಚಾರಣೆಗೆ ಹೋಗಲು ಸಾಧ್ಯವಾಗಿಲ್ಲ. ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಬಂಧಿಸುವ ಸಾಧ್ಯತೆ ಇದೆ. ಥೈರಾಯಿಡ್‌ ಮತ್ತು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಸಾಹುಕಾರ್‌ ಒಳಗಾಗಿದ್ದಾರೆ. ಅರ್ಜಿದಾರರ ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸಿ ಅವರಿಗೆ ರಕ್ಷಣೆ ನೀಡಬೇಕು ಎಂದು ಕೋರಿದರು.

ಫಲಾನುಭವಿಗಳ ಜತೆ ಸಂಪರ್ಕ:
ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಕುಟುಂಬ ಸದಸ್ಯರಿಗಷ್ಟೇ ಅಲ್ಲ ಬೇರೆಯವರಿಗೂ ಕೆಲಸ ಕೊಡಿಸಿದ್ದಾರೆ. ಅರ್ಜಿದಾರರ ವಿರುದ್ಧ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸಾಹುಕಾರ್‌ ಮತ್ತು ಅವರ ಕುಟುಂಬ ಸದಸ್ಯರು ಬಂಧಿತ ಬಸವರಾಜ್‌ ಕನ್ನಾಳೆ ಜತೆ ಸಂಪರ್ಕದಲ್ಲಿದ್ದರು. ಬಂಧಿತ ಕನ್ನಾಳೆ ಸಹ ಸಾಹುಕಾರ್‌ ಜತೆ ನಿರಂತರ ಸಂಪರ್ಕದಲ್ಲಿದ್ದರು. ಪರೀಕ್ಷೆಯ ದಿನದಂದು ತಮ್ಮ ಖಾಸಗಿ ಫೋನ್‌ ನಂಬರ್‌ನಿಂದ ಸಾಹುಕಾರ್‌ ಫಲಾನುಭವಿಗಳ ರಾತ್ರಿ 8 ಗಂಟೆವರೆಗೂ ಮಾತನಾಡಿದ್ದಾರೆ ಎಂದರು.

ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಅರ್ಜಿದಾರರು ತಮ್ಮ ಕಚೇರಿಯನ್ನು ಪುತ್ರ, ಪುತ್ರಿಯರು ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅರ್ಜಿದಾರರ ಪುತ್ರನು ಕೆಪಿಎಸ್‌ಸಿ ಪದಾಧಿಕಾರಿಗಳು, ಅಧಿಕಾರಿಗಳು, ಮಧ್ಯವರ್ತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾನೆ. ಅರ್ಜಿದಾರರು ತಾವಷ್ಟೇ ಕೆಪಿಎಸ್‌ಸಿ ಸೌಲಭ್ಯ ಬಳಸಿಲ್ಲ. ಅವರ ಕುಟುಂಬದವರೂ ಬಳಕೆ ಮಾಡಿದ್ದಾರೆ. ಈ ಎಲ್ಲ ದಾಖಲೆಗಳನ್ನು ಪರಿಗಣಿಸಿ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದರು.

ಆಗ ಅರುಣ್ ಶ್ಯಾಮ್ ಅವರು, ಕೆಪಿಎಸ್‌ಸಿ ಹಗರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಕೋರಿರುವ ಅರ್ಜಿಯ ಆದೇಶವನ್ನು ಸಮನ್ವಯ ನ್ಯಾಯಪೀಠ ಕಾಯ್ದಿರಿಸಿದೆ. ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಅಭ್ಯರ್ಥಿಗಳಿಗೆ ಅಲ್ಲಿ ರಕ್ಷಣೆ ನೀಡಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬೇರೆಯವರಿಗೆ ಹೋಲಿಸಿದರೆ ಅರ್ಜಿದಾರರ ಪಾತ್ರ ಗಂಭೀರವಾಗಿದೆ. ಸರ್ಕಾರ ಒದಗಿಸಿರುವ ದಾಖಲೆಗಳು ಅರ್ಜಿದಾರರ ಪಾತ್ರವನ್ನೂ ತೋರಿಸುತ್ತದೆ. ಕೋರ್ಟ್‌ಗೆ ಬಂದಾಗ ಮಾತ್ರ ಆರೋಗ್ಯ ಮತ್ತಿತರ ವಿಚಾರಗಳು ನೆನಪಾಗುತ್ತವೆಯೇ? ಜನರು ವ್ಯವಸ್ಥೆಯ ಮೇಲೆ ಸಂಪೂರ್ಣವಾಗಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಡೇನು? ಅವರ ಕುಟುಂಬದವರ ಸ್ಥಿತಿ ಏನಾಗಬೇಕು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು‌.

ಇಂಥ ಚಟುವಟಿಕೆಗೆ ಕೊನೆ ಹಾಡಬೇಕು. ಅಲ್ಲಲ್ಲೇ ಬಂಧಿಸಬೇಕು. ಇದೊಂದು ವ್ಯವಸ್ಥಿತ ವಂಚನೆ. ಇಲ್ಲಿ ಸಾಹುಕಾರ್‌ ಕುಟುಂಬ, ಪರೀಕ್ಷಾ ನಿಯಂತ್ರಕರು, ಸದಸ್ಯರು ಎಲ್ಲರೂ ಭಾಗಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟು, ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ನ್ಯಾಯಪೀಠ, ವಿಸ್ತೃತ ತೀರ್ಪಿನಲ್ಲಿ ಪ್ರತ್ಯೇಕವಾಗಿ ಕಾರಣಗಳನ್ನು ನೀಡಲಾಗುವುದು ಎಂದು ತಿಳಿಸಿತು.

Related Articles

Comments (0)

Leave a Comment