ಚುನಾವಣಾ ಪ್ರಚಾರದ ನಿಗದಿತ ಅವಧಿ ಮೀರಿ ಧ್ವನಿವರ್ಧಕ ಬಳಕೆ ಆರೋಪ; ಶಾಸಕ ರಹೀಮ್ ಖಾನ್ ವಿರುದ್ಧದ ಎಫ್‌ಐಆರ್ ರದ್ದು

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ‌ನಿಗದಿಪಡಿಸಲಾಗಿದ್ದ ರಾತ್ರಿ 10 ಗಂಟೆಯ ಗಡವು ಮೀರಿ ಹೆಚ್ಚುವರಿ 2 ನಿಮಿಷಗಳ ಕಾಲ ಧ್ವನಿವರ್ಧಕ ಬಳಸಿದ ಆರೋಪದಲ್ಲಿ ಬೀದರ್‌ನ ಕಾಂಗ್ರೆಸ್ ಶಾಸಕ ರಹೀಮ್ ಖಾನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಬೀದರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಶಾಸಕ ರಹೀಮ್ ಖಾನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೇವಲ ಎರಡು ನಿಮಿಷಗಳ ವ್ಯತ್ಯಾಸವನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ, ಅದರಲ್ಲೂ ನಿಖರವಾದ ಸಮಯವನ್ನು ನಿರ್ಧರಿಸಲು ಯಾವುದೇ ‘ಪ್ರಮಾಣಿತ ಗಡಿಯಾರ’ (ಸ್ಟ್ಯಾಂಡರ್ಡ್ ಕ್ಲಾಕ್) ನಿಗದಿಪಡಿಸದಿದ್ದಾಗ ಅರ್ಜಿದಾರರ ವಿರುದ್ಧದ ಆರೋಪ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ತೆಗೆದುಕೊಂಡಿದ್ದಾರೆ ಎನ್ನಲಾದ ಹೆಚ್ಚುವರಿ 2 ನಿಮಿಷಗಳ ಸಮಯವನ್ನು ಯಾವುದರಲ್ಲಿ ನೋಡಲಾಗಿದೆ, ಆ ಪ್ರಮಾಣಿತ ಗಡಿಯಾರ ಯಾವುದು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಫ್ಲೈಯಿಂಗ್ ಸ್ಕ್ವಾಡ್ ಪ್ರಕಾರ ಎರಡು ನಿಮಿಷ, ಅರ್ಜಿದಾರರ ಪ್ರಕಾರ ಅದು ಕೇವಲ ರಾತ್ರಿ 10 ಗಂಟೆ. ಹೀಗಿರುವಾಗ, ಕೇವಲ ಎರಡು ನಿಮಿಷಗಳಿಗಾಗಿ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಒಂದೊಮ್ಮೆ, ಅರ್ಜಿದಾರರು ತೆಗೆದುಕೊಂಡಿರುವ ಸಮಯ 10, 15 ಅಥವಾ 20 ನಿಮಿಷ ಮೀರಿದ್ದರೆ ಈ ಆರೋಪದಲ್ಲಿ ಸ್ವಲ್ಪ ಮಟ್ಟಿನ ಅರ್ಥವಿರುತ್ತಿತ್ತು. ಅರ್ಜಿದಾರರು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾದ ಈ 120 ಸೆಕೆಂಡುಗಳ ಯಾವ ಗಡಿಯಾರದಲ್ಲಿ ಎಂಬುದನ್ನು ಉಲ್ಲೇಖಿಸಿಲ್ಲ. ಆದ್ದರಿಂದ, ಫ್ಲೈಯಿಂಗ್ ಸ್ಕ್ವಾಡ್ ಬಿಂಬಿಸಿರುವಂತಹ ಅಪರಾಧ ಇದಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹರಿಯಾಣ ಸರ್ಕಾರ ಹಾಗೂ ಭಜನ್‌ಲಾಲ್ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ಆರೋಪಗಳು ಸತ್ಯವೆಂದು ಭಾವಿಸಿದರೂ ಅವು ಅಪರಾಧವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು, ಶಾಸಕರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?
ಫ್ಲೈಯಿಂಗ್ ಸ್ಕ್ವಾಡ್ ಆರೋಪಿಸಿರುವ ಪ್ರಕಾರ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಅರ್ಜಿದಾರರು, ರಾತ್ರಿ 10 ಗಂಟೆಗೆ ಮುಕ್ತಾಯಗೊಳಿಸಬೇಕಿದ್ದ ಚುನಾವಣಾ ಪ್ರಚಾರವನ್ನು ಧ್ವನಿವರ್ಧಕ ಬಳಸಿ ರಾತ್ರಿ 10.02ರವರೆಗೆ ಮುಂದುವರಿಸಿದ್ದರು. ಇದನ್ನೇ ಉಲ್ಲೇಖಿಸಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಬೀದರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಆಧರಿಸಿ ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 143 (ಅಕ್ರಮ ಕೂಟ), 147 (ಗಲಭೆ), 290 (ಸಾರ್ವಜನಿಕ ಉಪದ್ರವ) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 109ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದರಿಂದ, ಪ್ರಕರಣ ರದ್ದುಕೋರಿ ರಹೀಮ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಶಾಸಕರ ಪರ ವಕೀಲ ನವೀದ್ ಅಹ್ಮದ್, ಘಟನೆಯ ಸಮಯದಲ್ಲಿ ಅರ್ಜಿದಾರರ ಗಡಿಯಾರ ರಾತ್ರಿ 10.00 ಗಂಟೆ ತೋರಿಸುತ್ತಿತ್ತು. ಒಂದು ವೇಳೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ಗಡಿಯಾರವು 10:02 ಅನ್ನು ತೋರಿಸಿದ್ದರೂ ಸಹ, ಅಂತಹ ಉಲ್ಲಂಘನೆಗಳಿಗಾಗಿ ಯಾವುದೇ ಪ್ರಮಾಣಿತ ಗಡಿಯಾರವನ್ನು ನಿಗದಿಪಡಿಸದ ಕಾರಣ, ಅದರ ಆಧಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

Related Articles

Comments (0)

Leave a Comment